ಇರಾನ್ ಯುದ್ಧಕ್ಕೆ ಅಮೆರಿಕದ ಖಜಾನೆಯಿಂದ 47 ಬಿಲಿಯನ್ ಡಾಲರ್ಗೂ ಅಧಿಕ ವೆಚ್ಚ!
ಜುಲೈ ಅಂದಾಜಿಗಿಂತ ಶೇ. 25ರಷ್ಟು ಏರಿಕೆ; ಮಿಲಿಟರಿ ನೆಲೆಗಳ ದುರಸ್ತಿ ವೆಚ್ಚ ಇನ್ನೂ ಲೆಕ್ಕಕ್ಕಿಲ್ಲ
ಸಾಂದರ್ಭಿಕ ಚಿತ್ರ | Photo : warontherocks
ವಾಷಿಂಗ್ಟನ್: ಇರಾನ್ ಜೊತೆಗಿನ ಯುದ್ಧ ಅಮೆರಿಕದ ಬೊಕ್ಕಸಕ್ಕೆ ಭಾರಿ ಹೊರೆಯಾಗಿ ಪರಿಣಮಿಸಿದೆ. ಸಂಘರ್ಷಕ್ಕಾಗಿ ಅಮೆರಿಕದ ಸೇನೆ 47 ಬಿಲಿಯನ್ ಡಾಲರ್ ಗೂ ಹೆಚ್ಚು ವೆಚ್ಚ ಮಾಡಿದ್ದು, ಇದು ಜುಲೈನಲ್ಲಿ ಪೆಂಟಗನ್ ನೀಡಿದ್ದ ಅಂದಾಜಿಗಿಂತ ಶೇ. 25ಕ್ಕೂ ಅಧಿಕ ಎಂದು ರಾಯಿಟರ್ಸ್ ವರದಿ ಮಾಡಿದೆ.
ಯುದ್ಧದಲ್ಲಿ ಬಳಸಲಾದ ಯುದ್ಧಸಾಮಗ್ರಿಗಳನ್ನು ಮರುಪೂರಣಗೊಳಿಸಲು 29 ಬಿಲಿಯನ್ ಡಾಲರ್ ಗೂ ಹೆಚ್ಚು ವೆಚ್ಚವಾಗಿದೆ. ಸಂಘರ್ಷದ ವೇಳೆ ಕಳೆದುಹೋದ ವಿಮಾನಗಳು ಮತ್ತು ಡ್ರೋನ್ ಗಳು ಸೇರಿದಂತೆ ಮಿಲಿಟರಿ ಉಪಕರಣಗಳನ್ನು ಬದಲಾಯಿಸಲು 6 ಬಿಲಿಯನ್ ಡಾಲರ್ ಗೂ ಅಧಿಕ ಹಣ ವ್ಯಯವಾಗಿದೆ ಎಂದು ಇತ್ತೀಚಿನ ಅಂದಾಜು ತಿಳಿಸಿದೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಜುಲೈನಲ್ಲಿ ಯುದ್ಧದ ವೆಚ್ಚವನ್ನು 37.5 ಬಿಲಿಯನ್ ಡಾಲರ್ ಎಂದು ಅಂದಾಜಿಸಿದ್ದರು. ಆದರೆ, ಇದೀಗ ವೆಚ್ಚದ ಮೊತ್ತ 47 ಬಿಲಿಯನ್ ಡಾಲರ್ ದಾಟಿರುವುದು ಯುದ್ಧದ ಆರ್ಥಿಕ ಹೊರ ಹೆಚ್ಚುತ್ತಿರುವುದನ್ನು ಸೂಚಿಸಿದೆ.
ಇರಾನ್ ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ಅಮೆರಿಕದ ಮಿಲಿಟರಿ ನೆಲೆಗಳಿಗೆ ಉಂಟಾದ ಹಾನಿಯನ್ನು ಸರಿಪಡಿಸುವ ವೆಚ್ಚವನ್ನೂ ಸೇರಿಸಿದರೆ, ಒಟ್ಟು ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ದುರಸ್ತಿ ವೆಚ್ಚವನ್ನು ಪ್ರಸ್ತುತ ಅಂದಾಜಿನಲ್ಲಿ ಸ್ಪಷ್ಟವಾಗಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ವೆಚ್ಚದ ಅಂದಾಜಿನ ಕುರಿತು ಪ್ರತಿಕ್ರಿಯೆ ಕೋರಿ ಸಲ್ಲಿಸಿದ ಮನವಿಗೆ ಪೆಂಟಗನ್ ತಕ್ಷಣ ಉತ್ತರಿಸಿಲ್ಲ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.