‘ಇಟಲಿ ಹಾಗೂ ನಾನು ಎಂದಿಗೂ ಬೇಡುವುದಿಲ್ಲ’: ಡೊನಾಲ್ಡ್ ಟ್ರಂಪ್ ಗೆ ತಿರುಗೇಟು ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ
Photo Credit : NDTV
ರೋಮ್, ಜೂ.19: G7 ಶೃಂಗಸಭೆಯ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳಲು ಬೇಡಿಕೊಂಡಿದ್ದರು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮೆಲೋನಿ, ‘‘ಇಟಲಿ ಹಾಗೂ ನಾನು ಎಂದಿಗೂ ಬೇಡುವುದಿಲ್ಲ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಟಲಿಯ ಸುದ್ದಿಸಂಸ್ಥೆಯೊಂದರೊಂದಿಗೆ ಮಾತನಾಡಿದ್ದ ಟ್ರಂಪ್, ‘‘ನನಗೆ ಮೆಲೋನಿಯೊಂದಿಗೆ ಮಾತನಾಡುವ ಅಗತ್ಯ ಇರಲಿಲ್ಲ. ಆದರೆ, ನಾನು ಆಕೆಯೊಂದಿಗೆ ಮಾತನಾಡಿದ್ದಕ್ಕೆ ಬಹುಶಃ ಆಕೆ ಖುಷಿಪಟ್ಟಿರಬಹುದು’’ ಎಂದು ಹೇಳಿದ್ದರು.
ಅಲ್ಲದೆ, ಇಟಲಿಯ ಲಾ7 ಸುದ್ದಿ ವಾಹಿನಿಗೆ ನೀಡಿದ ಕಿರು ಸಂದರ್ಶನದಲ್ಲಿ, ‘‘ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳಲು ಮೆಲೋನಿ ತುಂಬಾ ಬೇಡಿಕೊಂಡರು. ಆದರೆ, ನಾನು ಆಕೆಯೊಂದಿಗೆ ಫೋಟೊ ತೆಗೆಸಿಕೊಳ್ಳಲಿಲ್ಲ. ಬಳಿಕ ನನಗೆ ಆಕೆಯ ಬಗ್ಗೆ ತುಂಬಾ ಬೇಸರವಾಯಿತು’’ ಎಂದು ಟ್ರಂಪ್ ಹೇಳಿದ್ದರು.
ಈ ಹೇಳಿಕೆಯನ್ನು ಅಲ್ಲಗಳೆದಿರುವ ಮೆಲೋನಿ, ‘‘ಇದೆಲ್ಲವೂ ಸಂಪೂರ್ಣ ಕಟ್ಟುಕತೆ’’ ಎಂದು ಪ್ರತಿಕ್ರಿಯಿಸಿದ್ದಾರೆ. ‘‘ಈ ಹೇಳಿಕೆಯನ್ನು ನೋಡಿ ನಾನು ದಿಗ್ಭ್ರಮೆಗೊಂಡೆ ’’ ಎಂದೂ ಅವರು ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೆಲೋನಿ, ‘‘ಡೊನಾಲ್ಡ್ ಟ್ರಂಪ್ ತಮ್ಮ ಮಿತ್ರ ರಾಷ್ಟ್ರಗಳಿಗೆ ಅವಮಾನ ಮಾಡುತ್ತಿರುವುದು ಇದೇ ಮೊದಲಲ್ಲ’’ ಎಂದು ಕಿಡಿಕಾರಿದ್ದಾರೆ.
‘‘ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಸಂಪೂರ್ಣವಾಗಿ ಕಟ್ಟುಕತೆಯಾಗಿದೆ. ತಮ್ಮ ಸ್ವಂತ ಮಿತ್ರ ರಾಷ್ಟ್ರಗಳೊಂದಿಗೇ ಅಮೆರಿಕ ಅಧ್ಯಕ್ಷರು ಹೀಗೇಕೆ ವರ್ತಿಸುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಇಷ್ಟಕ್ಕೂ ಇದು ಆಗುತ್ತಿರುವುದು ಮೊದಲ ಬಾರಿಯೇನೂ ಅಲ್ಲ’’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.