ಲೆಬನಾನ್ ಹೊತ್ತಿ ಉರಿಯಬೇಕು: ಇಸ್ರೇಲ್ ವಿದೇಶಾಂಗ ಸಚಿವರ ರೋಷಾವೇಷ
ಬೆನ್‌ಗ್ವಿರ್ | Photo Credit : AP
ಟೆಲ್ ಅವೀವ್: ‘‘ನಮ್ಮ ಪುತ್ರರ ರಕ್ತ ಹಾಗೂ ನಮ್ಮ ನಾಗರಿಕರ ಭದ್ರತೆಯು ಚೌಕಾಶಿಗಿಡುವಂತಹದ್ದಲ್ಲ ಎಂಬುದನ್ನು ಇಸ್ರೇಲ್ ಇಡೀ ಜಗತ್ತಿಗೆ ಸ್ಪಷ್ಟಪಡಿಸಬೇಕೆಂದು ನಾನು ಅಮೆರಿಕನ್ನರಿಗೆ ಗೌರವದೊಂದಿಗೆ ಹೇಳುತ್ತಿದ್ದೇನೆ. ಇಡೀ ಲೆಬನಾನ್ ಹೊತ್ತಿ ಉರಿಯಬೇಕು. ನಮ್ಮ ಒಬ್ಬ ತಾಯಿಯ ಕಣ್ಣೀರಿಗೆ ಲೆಬನಾನ್ ನ ಸಾವಿರ ತಾಯಂದಿರು ಆಳಬೇಕು’’ ಎಂದು ಇಸ್ರೇಲ್ ವಿದೇಶಾಂಗ ಸಚಿವ ಬೆನ್‌ಗ್ವಿರ್ ಅವರು ಹೇಳಿಕೆಯೊಂದರಲ್ಲಿ ಕಿಡಿಕಾರಿದ್ದಾರೆ.
ನೆಬತಿಹ್ ಪಟ್ಟಣದ ಎದುರು ಚಾಚಿಕೊಂಡಿರುವ ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾದ ಅಲಿ ಅಲ್-ತಾಯೆರ್ ಪರ್ವತಶ್ರೇಣಿಯ ಸಮೀಪ ಇಸ್ರೇಲಿ ಪಡೆಗಳನ್ನು ಗುರಿಯಿರಿಸಿ ರಾಕೆಟ್ ಹಾಗೂ ಮೋರ್ಟಾರ್ ಗಳೊಂದಿಗೆ ದಾಳಿ ನಡೆಸಿರುವುದಾಗಿ ಹಿಝ್ಬುಲ್ಲಾ ಹೋರಾಟಗಾರರು ತಿಳಿಸಿದ್ದಾರೆ. ಇಸ್ರೇಲಿ ಟ್ಯಾಂಕ್ ಗಳ ಮೇಲೂ ದಾಳಿ ನಡೆಸಿರುವುದಾಗಿ ಅವರು ಹೇಳಿದ್ದಾರೆ.
ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ಇರಾನ್ ನ ಸರ್ವೋಚ್ಚ ನಾಯಕ ಅಲಿ ಖಾಮಿನೈ ಅವರ ಹತ್ಯೆಗೆ ಪ್ರತೀಕಾರವಾಗಿ ಮಾರ್ಚ್ ತಿಂಗಳ ಆರಂಭದಲ್ಲಿ ಹಿಝ್ಬುಲ್ಲಾ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಆನಂತರ ಇಸ್ರೇಲ್, ಲೆಬನಾನ್ ಮೇಲೆ ದಾಳಿಯನ್ನು ತೀವ್ರಗೊಳಿಸಿತ್ತು.
►80ಕ್ಕೂ ಅಧಿಕ ಹಿಝ್ಬುಲ್ಲಾ ನೆಲೆಗಳ ಮೇಲೆ ದಾಳಿ: ಇಸ್ರೇಲ್
ಗುರುವಾರ ರಾತ್ರಿಯಿಂದ ಲೆಬನಾನ್ ನಲ್ಲಿ 80ಕ್ಕೂ ಅಧಿಕ ಹಿಝ್ಬುಲ್ಲಾ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ಹಾಗೂ ನೆಬತಿಹ್ ಹಾಗೂ ದಕ್ಷಿಣ ಲೆಬನಾನ್ ನ ಹೆಚ್ಚುವರಿ ಪ್ರದೇಶಗಳಲ್ಲಿ ಹಿಝ್ಬುಲ್ಲಾ ಮೂಲಸೌಕರ್ಯ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್‌ನ ಸೇನಾ ಹೇಳಿಕೆ ತಿಳಿಸಿದೆ.