×
Ad

ಇರಾನ್-ಅಮೆರಿಕ ಶಾಂತಿ ಮಾತುಕತೆ ಮುಂದೂಡಿಕೆ

Update: 2026-06-19 21:58 IST

Photo : AI

ಜಿನೇವಾ, ಜೂ.19: ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಶಾಂತಿ ಒಪ್ಪಂದವನ್ನು ಏರ್ಪಡಿಸಲು ಇರಾನ್‌ ನ ಸಂಧಾನಕಾರರೊಂದಿಗೆ ಅಮೆರಿಕವು ಶುಕ್ರವಾರ ಸ್ವಿಟ್ಜರ್‌ಲ್ಯಾಂಡ್‌ ನಲ್ಲಿ ನಡೆಸಬೇಕಿದ್ದ ಮಾತುಕತೆಗಳನ್ನು ಮುಂದೂಡಲಾಗಿದೆ.

ಪರ್ವತ ವಿಹಾರಧಾಮ ಬುರ್ಗೆನ್‌ಸ್ಟಾಕ್‌ ನಲ್ಲಿ ಆಯೋಜಿಸಲಾಗಿದ್ದ ಮಾತುಕತೆಗಳು ರದ್ದಾಗಿರುವುದನ್ನು ಸ್ವಿಟ್ಜರ್‌ಲ್ಯಾಂಡ್ ಸರ್ಕಾರ ದೃಢಪಡಿಸಿದೆ.

ಶಾಂತಿ ಮಾತುಕತೆಗಳು ರದ್ದಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ನಿಯೋಗದ ನೇತೃತ್ವ ವಹಿಸಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಶುಕ್ರವಾರದ ಸ್ವಿಟ್ಜರ್‌ಲ್ಯಾಂಡ್ ಪ್ರಯಾಣವನ್ನು ಕೈಬಿಟ್ಟಿದ್ದಾರೆ. ಇದರೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ನೆಲೆಸುವ ಸಾಧ್ಯತೆಯ ಬಗ್ಗೆ ಮತ್ತೆ ಅನಿಶ್ಚಿತತೆ ಉಂಟಾಗಿದೆ.

ಈ ಬಗ್ಗೆ ಸ್ವಿಟ್ಜರ್‌ಲ್ಯಾಂಡ್ ನ ವಿದೇಶಾಂಗ ಸಚಿವಾಲಯವು ಪತ್ರಿಕಾ ಹೇಳಿಕೆಯೊಂದನ್ನು ನೀಡಿ, ಅಮೆರಿಕ-ಇರಾನ್ ಮಾತುಕತೆಗಳನ್ನು ಮುಂದೂಡಲಾಗಿದೆ. ಮುಂಬರುವ ದಿನಗಳಲ್ಲಿ ಈ ಮಾತುಕತೆಗಳಿಗೆ ಅವಕಾಶ ಮಾಡಿಕೊಡಲು ಸ್ವಿಟ್ಜರ್‌ಲ್ಯಾಂಡ್ ಸಿದ್ಧವಾಗಿದೆ ಎಂದು ತಿಳಿಸಿದೆ.

ಆದರೆ, ಇರಾನ್‌ ನಿಂದ ತಕ್ಷಣಕ್ಕೆ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ದೊರೆತಿಲ್ಲ. ಅಮೆರಿಕದ ಜೊತೆಗಿನ ಕದನ ವಿರಾಮವನ್ನು ಕನಿಷ್ಠ 60 ದಿನಗಳಿಗೆ ವಿಸ್ತರಿಸುವ 14 ಅಂಶಗಳ ಒಪ್ಪಂದ ಏರ್ಪಟ್ಟ ಬಳಿಕ ಯುದ್ಧ ಅಂತ್ಯಗೊಳಿಸುವುದಕ್ಕೆ ಸಂಬಂಧಿಸಿದ ತಾಂತ್ರಿಕ ಮಾತುಕತೆಗಳನ್ನು ಆರಂಭಿಸಲು ತಾನು ಸಿದ್ಧನಿರುವುದಾಗಿ ಇರಾನ್ ಹೇಳಿಕೊಂಡಿತ್ತು.

ಈ ಮಧ್ಯೆ, ಇರಾನ್‌ ನ ಮುಖ್ಯ ಸಂಧಾನಕಾರರಲ್ಲಿ ಒಬ್ಬರಾದ ಮೊಹಮ್ಮದ್ ಬಾಘೆರ್ ಗಾಲಿಬಾಫ್ ಅವರು ಶುಕ್ರವಾರ ಹೇಳಿಕೆಯೊಂದನ್ನು ನೀಡಿ, ಒಂದು ವೇಳೆ ಒಪ್ಪಂದ ಉಲ್ಲಂಘಿಸಲ್ಪಟ್ಟಲ್ಲಿ ಟೆಹರಾನ್ ನಿರ್ಣಾಯಕ ಉತ್ತರ ನೀಡಲಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News