×
Ad

ಭಾರತದ ಅಭಿವೃದ್ಧಿ ಪಯಣದಲ್ಲಿ ಜಪಾನ್ ಪ್ರಮುಖ ಪಾಲುದಾರ: ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

ಜಪಾನ್‍ ನಿಂದ ಭಾರತದಲ್ಲಿ 10 ಲಕ್ಷ ಕೋಟಿ ಯೆನ್ ಹೂಡಿಕೆಯ ಗುರಿ

Update: 2025-08-29 20:46 IST

ಪ್ರಧಾನಿ ನರೇಂದ್ರ ಮೋದಿ | ಜಪಾನ್ ಪ್ರಧಾನಿ ಶಿಗೆರು ಇಷಿಬಾ (PC : REUTERS)

ಟೋಕಿಯೊ, ಆ.29: ಎರಡು ದಿನದ ಭೇಟಿಗಾಗಿ ಜಪಾನಿಗೆ ಶುಕ್ರವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರಧಾನಿ ಶಿಗೆರು ಇಷಿಬಾ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದಕ್ಕೂ ಮುನ್ನ ಅವರು ಭಾರತ-ಜಪಾನ್ ಜಂಟಿ ಆರ್ಥಿಕ ವೇದಿಕೆಯನ್ನುದ್ದೇಶಿಸಿ ಮಾತನಾಡಿದರು ಹಾಗೂ 15ನೇ ಭಾರತ- ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಂಡರು.

ಜಪಾನ್ ಪ್ರಧಾನಿ ಇಷಿಬಾ ಜೊತೆಗಿನ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ` ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್ ಪ್ರಮುಖ ಪಾಲುದಾರನಾಗಿದೆ. ಮುಂದಿನ 10 ವರ್ಷಗಳಲ್ಲಿ ಜಪಾನ್ ಭಾರತದಲ್ಲಿ ಲಕ್ಷ ಕೋಟಿ ಯೆನ್ (1 ಯೆನ್ ಎಂದರೆ 0.60 ರೂಪಾಯಿ) ಹೂಡಿಕೆ ಮಾಡುವ ಗುರಿ ಹೊಂದಲಾಗಿದೆ' ಎಂದರು.

ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಭಾರತ ಮತ್ತು ಜಪಾನ್ ನಡುವಿನ ಸಹಕಾರವು ನಿರ್ಣಾಯಕವಾಗಿದೆ. ಇಂದು ನಾವು ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದಲ್ಲಿ ಹೊಸ ಮತ್ತು ಸುವರ್ಣ ಅಧ್ಯಾಯಕ್ಕಾಗಿ ಬಲವಾದ ಅಡಿಪಾಯವನ್ನು ಹಾಕಿದ್ದೇವೆ. ಮುಂದಿನ ದಶಕಕ್ಕೆ ಸಹಕಾರಕ್ಕಾಗಿ ಹೊಸ ಮಾರ್ಗಸೂಚಿಯನ್ನು ರಚಿಸಿದ್ದೇವೆ. 10 ವರ್ಷದ ಭಾರತ-ಜಪಾನ್ ಮಾರ್ಗಸೂಚಿಯು ಹೂಡಿಕೆ, ನಾವೀನ್ಯತೆ, ಆರ್ಥಿಕ ಭದ್ರತೆ, ಪರಿಸರ, ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರಗಳನ್ನು ಕೇಂದ್ರೀಕರಿಸಲಿದೆ. ಉಭಯ ದೇಶಗಳ ಪಾಲುದಾರಿಕೆಯು ಪರಸ್ಪರ ನಂಬಿಕೆಯಲ್ಲಿ ಬೇರೂರಿದೆ, ನಮ್ಮ ರಾಷ್ಟ್ರೀಯ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಈ ಸಂದರ್ಭ ಭಾರತ ಮತ್ತು ಜಪಾನ್ ನಡುವೆ ತಂತ್ರಜ್ಞಾನ, ಬಾಹ್ಯಾಕಾಶ ಪರಿಶೋಧನೆ, ಶುದ್ಧ ಇಂಧನ, ನಿರ್ಣಾಯಕ ಖನಿಜಗಳು ಮತ್ತು ಸಾಂಸ್ಕೃತಿಕ ಸಂಬಂಧ ಸೇರಿದಂತೆ ವ್ಯಾಪಕವಾದ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಆಧುನಿಕ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ(ಎಐ), ಸೆಮಿಕಂಡಕ್ಟರ್‍ ಗಳು, ಇಂಟರ್‍ ನೆಟ್ ವ್ಯವಸ್ಥೆ, ಡಿಜಿಟಲ್ ಮೂಲಸೌಕರ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಸಹಯೋಗವನ್ನು ಹೆಚ್ಚಿಸುವ ಉದ್ದೇಶದ ಡಿಜಿಟಲ್ ಸಹಭಾಗಿತ್ವ 2.0 ಘೋಷಣೆ. ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯ ವಿಸ್ತರಣೆಗೆ ಆದ್ಯತೆ.

ನಿರ್ಣಾಯಕ ಖನಿಜ ಸಂಪನ್ಮೂಲಗಳ ಪರಿಶೋಧನೆ, ಸಂಸ್ಕರಣಾ ತಂತ್ರಜ್ಞಾನಗಳು, ಜಂಟಿ ಹೂಡಿಕೆಗಳು ಮತ್ತು ದಾಸ್ತಾನು ಮಾಡುವಿಕೆಯ ಮೇಲೆ ಕೇಂದ್ರೀಕರಿಸಿದ ಒಪ್ಪಂದಕ್ಕೆ ಸಹಿ ಹಾಕಿಲಾಯಿತು.

ಆರ್ಥಿಕ ಭದ್ರತೆಯಿಂದ ಪರಿಸರ ಸುಸ್ಥಿರತೆಯವರೆಗಿನ ಎಂಟು ಆದ್ಯತೆಯ ಕ್ಷೇತ್ರಗಳನ್ನು ಗುರುತಿಸುವುದು, ಜೊತೆಗೆ ಭದ್ರತಾ ಸಹಕಾರದ ಜಂಟಿ ಘೋಷಣೆ, ರಕ್ಷಣಾ ಮತ್ತು ಕಾರ್ಯತಂತ್ರದ ಸಹಯೋಗಕ್ಕಾಗಿ ಹೊಸ ಚೌಕಟ್ಟು ರಚನೆ.

ಮಾನವ ಸಂಪನ್ಮೂಲದ ವಿನಿಮಯದ ಕುರಿತಾದ ಕ್ರಿಯಾ ಯೋಜನೆ ಅಳವಡಿಸಿಕೊಳ್ಳಲಾಗಿದ್ದು ಅದರಂತೆ ಮುಂದಿನ 5 ವರ್ಷಗಳಲ್ಲಿ ಭಾರತದ 50,000 ಕುಶಲ ಕಾರ್ಮಿಕರನ್ನು ಜಪಾನ್ ಸ್ವಾಗತಿಸುತ್ತದೆ.

ಇಸ್ರೋ-ಜಾಕ್ಸಾ ಪಾಲುದಾರಿಕೆಯಲ್ಲಿ ಚಂದ್ರಯಾನ-5 ಯೋಜನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮತ್ತು ಜಪಾನ್ ಬಾಹ್ಯಾಕಾಶ ಪರಿಶೋಧನಾ ಸಂಸ್ಥೆ (ಜಾಕ್ಸಾ) ಚಂದ್ರನ ಧ್ರುವ ಪರಿಶೋಧನೆ ಕಾರ್ಯಾಚರಣೆ(ಚಂದ್ರಯಾನ-5) ಯಲ್ಲಿ ಜಂಟಿ ಸಹಕಾರ ಅನುಷ್ಠಾನಗೊಳಿಸುವ ವ್ಯವಸ್ಥೆಗೆ ಸಹಿ ಹಾಕಿವೆ. ಒಪ್ಪಂದವು ಚಂದ್ರನ ದಕ್ಷಿಣ ಧ್ರುವದ ಜಂಟಿ ಪರಿಶೀಲನೆಯ ನಿಯಮವನ್ನು ವ್ಯಾಖ್ಯಾನಿಸುತ್ತದೆ ಮತ್ತು ಸುಧಾರಿತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ-ಜಪಾನ್ ಸಹಯೋಗವನ್ನು ಬಲಪಡಿಸುತ್ತದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News