×
Ad

ಗಾಝಾದಲ್ಲಿ ಭೀಕರ ಹಸಿವಿನ ಬಿಕ್ಕಟ್ಟು | ಕುಟುಂಬಕ್ಕೆ ಆಹಾರ ಖರೀದಿಸಲು ಕ್ಯಾಮೆರಾ ಮಾರಾಟಕ್ಕಿಟ್ಟ ಫೋಟೋ ಜರ್ನಲಿಸ್ಟ್; ಪೋಸ್ಟ್ ವೈರಲ್

Update: 2025-07-26 15:43 IST

Photo credit: linkedin/Mohammed abo oun

ಗಾಝಾ: ಫೆಲೆಸ್ತೀನಿನ ಗಾಝಾ ಪಟ್ಟಿ ಪ್ರದೇಶದಲ್ಲಿ ಮುಂದುವರಿದಿರುವ ಹಿಂಸಾತ್ಮಕ ಪರಿಸ್ಥಿತಿ ಮತ್ತು ಕಟ್ಟುನಿಟ್ಟಿನ ಆರ್ಥಿಕ ನಿರ್ಬಂಧಗಳ ನಡುವೆ, ಸ್ಥಳೀಯ ಫೋಟೋ ಜರ್ನಲಿಸ್ಟ್ ಮುಹಮ್ಮದ್ ಅಬು ಔನ್ ಅವರು ತಮ್ಮ ವೃತ್ತಿಪರ ಕ್ಯಾಮೆರಾ ಮಾರಾಟ ಮಾಡಲು ಬಯಸಿರುವ ಭಾವುಕ ಮನವಿ ಜಾಗತಿಕ ಗಮನ ಸೆಳೆದಿದೆ.

ಲಿಂಕ್ಡ್‌ಇನ್‌ನಲ್ಲಿ ಪ್ರಕಟಿಸಿದ ಈ ಮನವಿ, ಗಾಝಾದಲ್ಲಿನ ಆಹಾರ ಬಿಕ್ಕಟ್ಟಿನ ಭೀಕರತೆ ಮತ್ತು ನಾಗರಿಕರ ಬದುಕಿನ ನಿತ್ಯ ಸಂಘರ್ಷವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.

"ನಾನು ಗಾಝಾದ ಫೋಟೋ ಜರ್ನಲಿಸ್ಟ್. ನನಗೆ ಮತ್ತು ನನ್ನ ಕುಟುಂಬಕ್ಕೆ ಆಹಾರ ಖರೀದಿಸಲು ನನ್ನ ಕ್ಯಾಮೆರಾ ಮತ್ತು ಪತ್ರಿಕಾ ವೃತ್ತಿಯ ಉಪಕರಣಗಳನ್ನು ಮಾರಲು ಬಯಸುತ್ತಿದ್ದೇನೆ," ಎಂದು ಅಬು ಔನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.


 



ಈ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಗಾಝಾದಲ್ಲಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಮಾನವೀಯ ಸಂಕಷ್ಟವನ್ನು ವಿಶ್ವದ ಮುಂದಿಟ್ಟಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಚರ್ಚೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಗಾಝಾದ ಮೇಲೆ ಆಹಾರ ಮತ್ತು ನೆರವು ಸರಬರಾಜಿನಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಮುಂದುವರಿಸಿದೆ. ಇದರ ಪರಿಣಾಮವಾಗಿ, ಗಾಝಾ ಪಟ್ಟಿ ಪ್ರದೇಶ ತೀವ್ರ ಆಹಾರ ಕೊರತೆಯ ಸ್ಥಿತಿಗೆ ತಲುಪಿದೆ. ಅಂತಾರಾಷ್ಟ್ರೀಯ ನೆರವು ಸಂಸ್ಥೆಗಳ ಎಚ್ಚರಿಕೆಯಂತೆ, ಈ ಪ್ರದೇಶ ಈಗ ಕ್ಷಾಮದ ಅಂಚಿನಲ್ಲಿದೆ. ಅಪೌಷ್ಟಿಕತೆಯಿಂದಾಗಿ ಮಕ್ಕಳ ಮತ್ತು ವೃದ್ಧರ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ.

ಗಾಝಾ ನಗರದಲ್ಲಿ ಶುಕ್ರವಾರ ನಡೆದ ದೃಶ್ಯವು ಆತಂಕ ಹುಟ್ಟಿಸುವಂತಿತ್ತು. ಉಚಿತ ಆಹಾರ ಕೇಂದ್ರವೊಂದರ ಹೊರಗಡೆ, ನೀರಿನಂಶವಿರುವ ಸೂಪಿಗಾಗಿ ಖಾಲಿ ಪಾತ್ರೆಗಳನ್ನು ಹಿಡಿದ ನೂರಾರು ನಾಗರಿಕರು ಉದ್ದ ಸಾಲಿನಲ್ಲಿ ನಿಂತಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಐದು ಮಕ್ಕಳ ತಾಯಿ ರಿಹಾಮ್ ದ್ವಾಸ್, “ನಾವು ಮೂರು ತಿಂಗಳಿನಿಂದ ಸರಿಯಾದ ಆಹಾರ ಇಲ್ಲದೇ ಬದುಕುತ್ತಿದ್ದೇವೆ. ಉಚಿತ ಆಹಾರ ಕೇಂದ್ರಗಳಲ್ಲಿ ಸಿಗುವ ಒಂದು ಮಡಕೆ ಸೂಪ್ ಅಷ್ಟೇ ನಮ್ಮ ಆಹಾರ.  ಹಲವಾರು ಬಾರಿ ಅದೂ ಸಿಗುವುದಿಲ್ಲ. ಆಗ ನನ್ನ ಮಕ್ಕಳನ್ನು IV ಸಲೈನ್ ಡ್ರಿಪ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯುವಂತಾಗುತ್ತದೆ,” ಎಂದು ಭಾವುಕರಾಗಿ ವಿವರಿಸಿದರು.

ಗಾಝಾದಲ್ಲಿನ ವಸ್ತುಸ್ಥಿತಿಯನ್ನು ಜಗತ್ತಿಗೆ ತೆರೆದಿಡುತ್ತಿರುವ ಪ್ರಮುಖ ಮಾಧ್ಯಮ ಸಂಸ್ಥೆಯಲ್ಲಿ ಒಂದಾದ Aljazeeraವು ಇತ್ತೀಚೆಗೆ ಅಲ್ಲಿನ ಪತ್ರಕರ್ತರ ಸ್ಥಿತಿಗತಿಯ ಕುರಿತು ಜಗತ್ತಿನ ಕಣ್ಣು ತೆರೆಸಿತ್ತು. ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಾನೂನು ಸಂಸ್ಥೆಗಳ ಮಧ್ಯಪ್ರವೇಶ ಸಾಧ್ಯವಾಗದಿದ್ದರೆ ಅಲ್ಲಿನ ವಸ್ತು ಸ್ಥಿತಿ ಜಗತ್ತಿಗೆ ತಿಳಿಯದೆ ಹೋಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News