ಮಾಲಿ: ಚಿನ್ನದ ಗಣಿ ದುರಂತದಲ್ಲಿ ಕನಿಷ್ಠ 48 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ
ಬಮಾಕೊ: ಪೂರ್ವ ಮಾಲಿಯಲ್ಲಿ ಕಾನೂನುಬಾಹಿರವಾಗಿ ಕಾರ್ಯಾಚರಿಸುತ್ತಿದ್ದ ಚಿನ್ನದ ಗಣಿ ಕುಸಿದು ಕನಿಷ್ಠ 48 ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಕೆನೈಬಾ ಜಿಲ್ಲೆಯ ದಬಿಯಾ ಪ್ರಾಂತದಲ್ಲಿ ಚೀನಾದ ಪ್ರಜೆಗಳು ನಿರ್ವಹಿಸುವ ಬಿಲಾಲಿಕೋಟೊ ಚಿನ್ನದ ಗಣಿಯಲ್ಲಿ ಶನಿವಾರ ದುರಂತ ಸಂಭವಿಸಿದೆ. ಇಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಪಡೆಯಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸರಕಾರದ ಮೂಲಗಳು ಹೇಳಿವೆ. ಗಣಿಯಾಳದಲ್ಲಿ ಸಂಗ್ರಹಗೊಂಡಿದ್ದ ನೀರಿಗೆ ಬಿದ್ದು ಹೆಚ್ಚಿನವರು ಸಾವನ್ನಪ್ಪಿದ್ದಾರೆ. ಮಹಿಳೆ ಹಾಗೂ ಆಕೆಯ ಪುಟ್ಟ ಮಗು ಮೃತಪಟ್ಟವರಲ್ಲಿ ಸೇರಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿರುವ ಮಾಹಿತಿಯಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿ ಹೇಳಿದೆ.
ಆಫ್ರಿಕಾದ ಪ್ರಮುಖ ಚಿನ್ನ ಉತ್ಪಾದಿಸುವ ರಾಷ್ಟ್ರವಾಗಿರುವ ಮಾಲಿಯಲ್ಲಿ ಚಿನ್ನದ ಗಣಿ ಪ್ರದೇಶಗಳಲ್ಲಿ ಪದೇ ಪದೇ ದುರಂತಗಳು ವರದಿಯಾಗುತ್ತಿವೆ. ಜತೆಗೆ ಕಾನೂನುಬಾಹಿರ ಗಣಿಗಾರಿಕೆಯನ್ನು ನಿಯಂತ್ರಿಸಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.