ನೆತನ್ಯಾಹು ನ್ಯೂಯಾರ್ಕ್ ಗೆ ಬಂದರೆ ಬಂಧಿಸುವ ಸಾಧ್ಯತೆ ಪರಿಶೀಲನೆ; ಕಾನೂನು ಅಧಿಕಾರಿಗಳೊಂದಿಗೆ ಸಮಾಲೋಚನೆ: NYC ಮೇಯರ್ ಝೊಹ್ರಾನ್ ಮಮ್ದಾನಿ
ಬೆಂಜಮಿನ್ ನೆತನ್ಯಾಹು | Photo Credit : PTI, ಝೊಹ್ರಾನ್ ಮಮ್ದಾನಿ |Photo Credit : AP \ PTI
ನ್ಯೂಯಾರ್ಕ್: ಸೆಪ್ಟೆಂಬರ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ (UN) ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನ್ಯೂಯಾರ್ಕ್ ಗೆ ಭೇಟಿ ನೀಡಿದರೆ, ಅವರನ್ನು ಬಂಧಿಸಲು ಕಾನೂನುಬದ್ಧ ಅವಕಾಶವಿದೆಯೇ ಎಂಬ ಕುರಿತು ನಗರದ ಕಾನೂನು ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ಸಮಾಲೋಚನೆ ನಡೆಸುತ್ತಿರುವುದಾಗಿ ನ್ಯೂಯಾರ್ಕ್ ನಗರದ ಮೇಯರ್ ಝೊಹ್ರಾನ್ ಮಮ್ದಾನಿ ಹೇಳಿದ್ದಾರೆ.
2026ರ ಆರಂಭದಲ್ಲಿ ಅಧಿಕಾರ ವಹಿಸಿಕೊಂಡಿರುವ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ, ಗಾಝಾದ ಮೇಲಿನ ಇಸ್ರೇಲ್ ನ ಸೇನಾ ಕಾರ್ಯಾಚರಣೆಯನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ.
ದಿ ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ನ್ಯೂಯಾರ್ಕ್ ನಗರದ ಕಾನೂನು ಏನು ಮಾಡಲು ಅವಕಾಶ ನೀಡುತ್ತದೆಯೋ ಅದನ್ನೇ ನಾವು ಮಾಡುತ್ತೇವೆ. ಆದರೆ, ಆ ಉದ್ದೇಶಕ್ಕಾಗಿ ಹೊಸ ಕಾನೂನುಗಳನ್ನು ರೂಪಿಸುವುದಿಲ್ಲ" ಎಂದು ಹೇಳಿದರು. ಈ ಸಂಬಂಧ ನಗರದ ಕಾನೂನು ಇಲಾಖೆಯೊಂದಿಗೆ ಸಕ್ರಿಯ ಸಮಾಲೋಚನೆ ನಡೆಸುತ್ತಿರುವುದಾಗಿಯೂ ತಿಳಿಸಿದರು.
ಮಮ್ದಾನಿ ಈ ಹಿಂದೆಯೂ ನೆತನ್ಯಾಹು ಅವರನ್ನು "ಯುದ್ಧ ಅಪರಾಧಿ" ಎಂದು ಹೇಳಿದ್ದು, ಅವರು "ಹೇಗ್ ನಲ್ಲಿ ವಿಚಾರಣೆ ಎದುರಿಸಬೇಕಾದವರು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. 2024ರ ಕೊನೆಯಲ್ಲಿ ಗಾಝಾದಲ್ಲಿನ ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಪ್ರಕರಣದಲ್ಲಿ ನೆತನ್ಯಾಹು ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ಬಂಧನ ವಾರಂಟ್ ಹೊರಡಿಸಿತ್ತು.
ICC ವಾರಂಟ್ ಜಾರಿಗೊಳಿಸಲು ಸಾಧ್ಯವಾಗುವ "ಪ್ರತಿಯೊಂದು ಕಾನೂನು ಸಾಧ್ಯತೆಯನ್ನು" ಪರಿಶೀಲಿಸುವುದಾಗಿ ಝೊಹ್ರಾನ್ ಮಮ್ದಾನಿ ಹೇಳಿದ್ದಾರೆ. ಇದೇ ರೀತಿಯ ICC ಬಂಧನ ವಾರಂಟ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧವೂ ಹೊರಡಿಸಿರುವುದನ್ನು ಅವರು ಉಲ್ಲೇಖಿಸಿದರು.
"ನ್ಯೂಯಾರ್ಕ್ ಅಂತರರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರುವ ನಗರ ಎಂಬುದು ನನ್ನ ನಂಬಿಕೆ" ಎಂದು ಹೇಳಿದ ಮಮ್ದಾನಿ, ಫೆಡರಲ್ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳದಿದ್ದರೂ, ನಗರದ ವ್ಯಾಪ್ತಿಯಲ್ಲಿ ಕಾನೂನುಬದ್ಧವಾಗಿ ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಪರಿಶೀಲಿಸಲಾಗುವುದು ಎಂದರು.
ಆದರೆ, ಕಾನೂನು ತಜ್ಞರು ಇಂತಹ ಬಂಧನ ನಡೆಯುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕವು ICCಯ ಸದಸ್ಯ ರಾಷ್ಟ್ರವಲ್ಲ. ಅಲ್ಲದೆ, ಫೆಡರಲ್ ಕಾನೂನುಗಳ ಪ್ರಕಾರ ICC ಹೊರಡಿಸುವ ಬಂಧನ ವಾರಂಟ್ ಗಳನ್ನು ಸ್ಥಳೀಯ ಅಧಿಕಾರಿಗಳು ಜಾರಿಗೊಳಿಸಲು ಅವಕಾಶವಿಲ್ಲ. ರಾಷ್ಟ್ರದ ಮುಖ್ಯಸ್ಥರು ಸೇರಿದಂತೆ ವಿದೇಶಿ ಅಧಿಕಾರಿಗಳನ್ನು ಸ್ಥಳೀಯ ಮಟ್ಟದಲ್ಲಿ ಬಂಧಿಸುವ ಅಧಿಕಾರವೂ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ನಡುವೆ, ಮೇಯರ್ ಅವರ ಹೇಳಿಕೆಗಳು ನೆತನ್ಯಾಹು ಅವರ ಪ್ರಯಾಣ ಯೋಜನೆಗೆ ಯಾವುದೇ ತೊಂದರೆ ಉಂಟುಮಾಡುವುದಿಲ್ಲ ಎಂದು ಇಸ್ರೇಲ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಸೆಪ್ಟೆಂಬರ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ನೆತನ್ಯಾಹು ನ್ಯೂಯಾರ್ಕ್ ಗೆ ಆಗಮಿಸುವ ನಿರೀಕ್ಷೆಯಿದೆ.