ಕಾಡ್ಗಿಚ್ಚಿನ ಹೊಗೆ ಮಾಲಿನ್ಯದ ಹಿನ್ನೆಲೆಯಲ್ಲಿ ಸುಂಕ ಹೆಚ್ಚಳ: ಕೆನಡಾಕ್ಕೆ ಟ್ರಂಪ್ ಬೆದರಿಕೆ
ಡೊನಾಲ್ಡ್ ಟ್ರಂಪ್ | Photo Credit : PTI
ನ್ಯೂಯಾರ್ಕ್, ಜು.18: ಅಮೆರಿಕದ ಬಹುತೇಕ ಭಾಗಗಳನ್ನು ಉಸಿರುಗಟ್ಟಿಸುತ್ತಿರುವ ಕಾಡ್ಗಿಚ್ಚಿನ ಹೊಗೆ ಮಾಲಿನ್ಯದ ವೆಚ್ಚವನ್ನು ಸರಿದೂಗಿಸಲು ಕೆನಡಾ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಕೆನಡಾ ಮತ್ತು ಉತ್ತರ ಮಿನ್ನೇಸೋಟದಿಂದ ತೂರಿ ಬರುತ್ತಿರುವ ದಟ್ಟವಾದ ಕಾಡ್ಗಿಚ್ಚಿನ ಹೊಗೆಯ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ಅನಾರೋಗ್ಯಕರ ವಾಯು ಗುಣಮಟ್ಟದ ಎಚ್ಚರಿಕೆಗಳನ್ನು ನೀಡಲಾಗಿದೆ. ಕೆನಡಾದ ಕಾಡ್ಗಿಚ್ಚು ಮಾಹಿತಿ ವ್ಯವಸ್ಥೆಯ ಪ್ರಕಾರ, ಕೆನಡಾದಲ್ಲಿ 937 ಸಕ್ರಿಯ ಕಾಡ್ಗಿಚ್ಚುಗಳಿದ್ದು ಅವುಗಳಲ್ಲಿ ಬಹುಪಾಲು ನಿಯಂತ್ರಣಕ್ಕೆ ಸಿಗದೆ ಉರಿಯುತ್ತಿವೆ.
`ಇದು ಉದ್ದೇಶಪೂರ್ವಕ ನಿರ್ಲಕ್ಷ್ಯವಾಗಿದೆ ಮತ್ತು ಪ್ರತಿ ವರ್ಷವೂ ಮರುಕಳಿಸುತ್ತಿದ್ದು, ಅಮೆರಿಕಕ್ಕೆ ಕೋಟ್ಯಂತರ ಡಾಲರ್ ನಷ್ಟವನ್ನು ಉಂಟುಮಾಡುತ್ತಿದೆ. ಈ ಮಾಲಿನ್ಯದ ವೆಚ್ಚವನ್ನು ಅನಿವಾರ್ಯವಾಗಿ ಕೆನಡಾ ಪ್ರಸ್ತುತ ಪಾವತಿಸುತ್ತಿರುವ ಸುಂಕಕ್ಕೆ ಸೇರಿಸಬೇಕಾಗುತ್ತದೆ. ಕೆನಡಾ ಸರಕಾರವು ತನ್ನ ಅರಣ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಅವರು ಅರಣ್ಯ ನಿರ್ವಹಣೆ ಮತ್ತು ಕಸ-ಕಡ್ಡಿಗಳನ್ನು ತೆಗೆದುಹಾಕುವಲ್ಲಿ ವಿಫಲರಾಗಿದ್ದಾರೆ' ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.