ಇಸ್ರೇಲ್‍ಗೆ ಹೆಚ್ಚುವರಿ ಯುದ್ಧ ವಿಮಾನ ನಿಯೋಜನೆಗೆ ಅಮೆರಿಕ ಸಿದ್ಧತೆ : ವರದಿ

Update: 2026-07-18 21:11 IST

Photo Credit : PTI 

ವಾಶಿಂಗ್ಟನ್, ಜು.18: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಗಣನೀಯವಾಗಿ ವಿಸ್ತರಿಸಲು ಆಲೋಚಿಸುತ್ತಿದ್ದು, ಇದರ ಭಾಗವಾಗಿ ಇಸ್ರೇಲ್‍ಗೆ ಹೆಚ್ಚುವರಿ ವೈಮಾನಿಕ ಇಂಧನ ಮರುಪೂರಣ ವಿಮಾನಗಳನ್ನು ಕಳುಹಿಸಲು ಅಮೆರಿಕ ಸಿದ್ಧತೆ ನಡೆಸುತ್ತಿದೆ ಎಂದು `ಆಕ್ಸಿಯೋಸ್' ವರದಿ ಮಾಡಿದೆ.

ಪ್ರಸ್ತುತ ಹಾರ್ಮುಝ್ ಜಲಸಂಧಿಯ ಸುತ್ತ ನಡೆಯುತ್ತಿರುವ ಅಮೆರಿಕದ ದಾಳಿಗಳಿಗಿಂತಲೂ ಮೀರಿ, ಇರಾನ್‍ನೊಳಗಿನ ಪ್ರಮುಖ ಮೂಲಸೌಕರ್ಯಗಳು ಮತ್ತು ಪರಮಾಣು ಸಂಬಂಧಿತ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಯನ್ನು ವಿಸ್ತರಿಸುವ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ. ಭೂಗತ `ಪಿಕ್ಸ್‍ಆಕ್ಸ್ ಮೌಂಟೇನ್' ತಾಣ ಮತ್ತೊಂದು ಮತ್ತೊಂದು ಸಂಭವನೀಯ ಗುರಿಯಾಗಿದ್ದು, ಇದು ನಿರ್ಮಾಣ ಹಂತದಲ್ಲಿರುವ ಸೌಲಭ್ಯವೆಂದು ಶಂಕಿಸಲಾಗಿದೆ. ಟ್ರಂಪ್ ತಮ್ಮ ಮುಂದಿನ ಕ್ರಮವನ್ನು ನಿರ್ಧರಿಸುವ ಮುನ್ನ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್ ಡ್ಯಾನ್ ಕೈನ್ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಅಮೆರಿಕ ಪ್ರಸ್ತುತ ಇಸ್ರೇಲ್‍ನ ಬೆನ್ ಗುರಿಯನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 30 ಮಿಲಿಟರಿ ಇಂಧನ ಮರುಪೂರಣ ವಿಮಾನಗಳನ್ನು ಮತ್ತು ದಕ್ಷಿಣ ಇಸ್ರೇಲ್‍ನ ರಾಮನ್ ವಿಮಾನ ನಿಲ್ದಾಣದಲ್ಲಿ ಸರಿಸುಮಾರು ಅಷ್ಟೇ ಸಂಖ್ಯೆಯ ವಿಮಾನಗಳನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಇನ್ನು ಹತ್ತಾರು ವಿಮಾನಗಳನ್ನು ನಿಯೋಜಿಸಲು ಅಮೆರಿಕ ಬಯಸಿದೆ.

ವೈಮಾನಿಕ ಇಂಧನ ಮರುಪೂರಣ ವಿಮಾನಗಳು ಫೈಟರ್ ಜೆಟ್‍ಗಳು ಮತ್ತು ಬಾಂಬರ್‌ಗಳು ದೀರ್ಘಕಾಲದವರೆಗೆ ಆಕಾಶದಲ್ಲಿರಲು ಮತ್ತು ಹೆಚ್ಚಿನ ದೂರದವರೆಗೆ ಕಾರ್ಯಾಚರಣೆಗಳನ್ನು ಮುಂದುವರಿಸಲು ಸಹಾಯ ಮಾಡುತ್ತವೆ. ಇರಾನ್‍ನೊಳಗಿನ ಗುರಿಗಳ ವಿರುದ್ಧದ ಯಾವುದೇ ಸುದೀರ್ಘ ಕಾರ್ಯಾಚರಣೆಗೆ ಇವು ಅತ್ಯಂತ ಪ್ರಮುಖವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News