ಮಮ್ದಾನಿ ವಾಶಿಂಗ್ಟನ್ ಗೆ ಗೌರವ ಕೊಡಬೇಕು: ಟ್ರಂಪ್
ಡೊನಾಲ್ಡ್ ಟ್ರಂಪ್ , ರೊಹ್ರಾನ್ ಮಮ್ದಾನಿ |Photo Credit : PTI
ವಾಶಿಂಗ್ಟನ್, ನ. 6: ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆಯಾಗಿರುವ ರೊಹ್ರಾನ್ ಮಮ್ದಾನಿ ಕೇಂದ್ರ ಸರಕಾರದ ಜೊತೆಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ಸಹಕಾರ ನೀಡಲು ಅವರು ವಿಫಲವಾದರೆ ಅವರು ತುಂಬಾ ವಿಷಯಗಳಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದಾಗಿಯೂ ಅವರು ಎಚ್ಚರಿಸಿದ್ದಾರೆ.
ನಾನು ಮಮ್ದಾನಿಯೊಂದಿಗೆ ಮಾತನಾಡಲು ಸಿದ್ಧನಿದ್ದೇನೆ, ಆದರೆ ನೂತನ ಮೇಯರ್ ಕೇಂದ್ರ ಸರಕಾರಕ್ಕೆ ಗೌರವ ಕೊಡಬೇಕು ಎಂದು ಫಾಕ್ಸ್ ನ್ಯೂಸ್ ನ ಬ್ರೆಟ್ ಬೇಯರ್ ರಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದರು. ಕೇಂದ್ರ ಸರಕಾರವು ನ್ಯೂಯಾರ್ಕ್ ನಗರಕ್ಕೆ ನೀಡುತ್ತಿರುವ ಆರ್ಥಿಕ ನೆರವು ಮುಂದುವರಿಯಬೇಕಾದರೆ ಅವರು ವಾಶಿಂಗ್ಟನ್ ಗೆ ಗೌರವ ಕೊಡಬೇಕು ಎಂದರು.
ಇದಕ್ಕೂ ಮುನ್ನ, ಮೇಯರ್ ಆಗಿ ಮಮ್ದಾನಿ ಆಯ್ಕೆಯಾಗಿರುವುದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ನ್ಯೂಯಾರ್ಕ್ ಜನರು ಎಡಪಂಥೀಯ ಮಮ್ದಾನಿಯನ್ನು ಆಯ್ಕೆ ಮಾಡಿದ ಬಳಿಕ ಅಮೆರಿಕವು ‘‘ಸಾರ್ವಭೌಮತ್ವ’’ವನ್ನು ಕಳೆದುಕೊಂಡಿದೆ ಎಂದು ಹೇಳಿದ್ದರು.