ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲಿಸುತ್ತಿರುವುದು (Photo:TOI)  

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ ನ ನೈಋತ್ಯ ಭಾಗದಲ್ಲಿರುವ ವೆಡೆಲಾ ಟೌನ್ಶಿಪ್ ನ ಪಬ್‌ ಒಂದರಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ 17 ಜನರು ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಗೌಟೆಂಗ್ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ಸುಮಾರು 9:30ರ ವೇಳೆಗೆ ಈ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲೇ 17 ಮಂದಿ ಮೃತಪಟ್ಟಿರುವುದಾಗಿ ತುರ್ತು ವೈದ್ಯಕೀಯ ಸೇವಾ ಸಿಬ್ಬಂದಿ ದೃಢಪಡಿಸಿದ್ದಾರೆ. ಮೃತಪಟ್ಟವರಲ್ಲಿ 13 ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ.

ಗುರುತು ಪತ್ತೆಯಾಗದ ಎಂಟು ಮಂದಿ ಶಂಕಿತರು ಮದ್ಯದಂಗಡಿಯ ಬಳಿ ಆಗಮಿಸಿ, ಮೊದಲು ಹೊರಗೆ ಮದ್ಯಪಾನ ಮಾಡುತ್ತಿದ್ದ ಗ್ರಾಹಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಒಳಗೆ ನುಗ್ಗಿ ಅಲ್ಲಿದ್ದವರ ಮೇಲೂ ನಿರಂತರವಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದುಷ್ಕರ್ಮಿಗಳು ಎಕೆ-47 ರೈಫಲ್ಗಳು ಮತ್ತು ಪಿಸ್ತೂಲ್ಗಳನ್ನು ಹೊಂದಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಗುಂಡೇಟಿನಿಂದ ಗಾಯಗೊಂಡ 15 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈವರೆಗೆ ಈ ಸಂಬಂಧ ಯಾವುದೇ ಬಂಧನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಗೆ ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ತಲೆಮರೆಸಿಕೊಂಡಿರುವ ಶಂಕಿತರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor