Venezuela | ರಷ್ಯಾ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ : ಗ್ರೀನ್‍ಲ್ಯಾಂಡ್ ವಶಕ್ಕೆ ಮುಂದಾದ ಟ್ರಂಪ್
ಡೊನಾಲ್ಡ್ ಟ್ರಂಪ್ (File Photo: PTI)
ವಾಷಿಂಗ್ಟನ್: ಆರ್ಥಿಕ ದಿಗ್ಬಂಧನವನ್ನು ಉಲ್ಲಂಘಿಸಿ ಯೂರೋಪಿಯನ್ ಜಲಪ್ರದೇಶದಲ್ಲಿ Venezuelaದಿಂದ ತೈಲ ಸಾಗಿಸುತ್ತಿದ್ದ ರಷ್ಯಾ ಧ್ವಜ ಹೊಂದಿದ್ದ ಹಡಗನ್ನು ಅಮೆರಿಕದ ನೌಕಾಪಡೆ ವಶಪಡಿಸಿಕೊಂಡಿರುವುದು ಈ ಭಾಗದಲ್ಲಿ ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಏತನ್ಮಧ್ಯೆ ಗ್ರೀನ್‍ಲ್ಯಾಂಡ್ ಮೇಲೆ ಪ್ರಭುತ್ವ ಸಾಧಿಸುವ ನಿರ್ಧಾರವನ್ನು ಟ್ರಂಪ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಯೂರೋಪಿಯನ್ ಒಕ್ಕೂಟದ ಪ್ರಬಲ ವಿರೋಧದ ನಡುವೆಯೂ ಬಲಪ್ರಯೋಗ ಮೂಲಕ ಅಥವಾ ಖರೀದಿ ಮೂಲಕ ಗ್ರೀನ್‍ಲ್ಯಾಂಡ್ ಸ್ವಾಧೀನಕ್ಕೆ ಪಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅಂತರರಾಷ್ಟ್ರೀಯ ನಿಯಮಾವಳಿಯ ಹೊರತಾಗಿಯೂ ಅಮೆರಿಕ ಮೊದಲು ಸಿದ್ಧಾಂತದ ಅನ್ವಯ ತನ್ನ ಬಲ, ಸಾಮಥ್ರ್ಯ ಹಾಗೂ ಶಕ್ತಿಯ ಮೂಲಕ ಅಮೆರಿಕ ವಿಶ್ವದಲ್ಲಿ ಪ್ರಾಬಲ್ಯ ಸ್ಥಾಪಿಸಲಿದೆ ಎಂದು ಟ್ರಂಪ್ ಆಡಳಿತ ಘೋಷಿಸಿರುವುದು ಹೊಸ ವಿವಾದ ಸೃಷ್ಟಿಸಿದೆ. ವಿಶ್ವಸಂಸ್ಥೆಯ ತೀವ್ರ ಟೀಕೆ ಸೇರಿದಂತೆ Venezuela ಮೇಲೆ ಅಮೆರಿಕ ದಾಳಿಗೆ ವಿಶ್ವಾದ್ಯಂತ ಕಳವಳ ವ್ಯಕ್ತವಾದ ಬೆನ್ನಲ್ಲೇ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಇದನ್ನು ತಳ್ಳಿಹಾಕಿದ್ದಾರೆ. "ಈ ಗೋಲಾರ್ಧದಲ್ಲಿ ಕಮ್ಯುನಿಸ್ಟರು ನಮ್ಮದನ್ನು ಕದಿಯಲು ನಾವು ಅವಕಾಶ ನೀಡಬೇಕೇ? ಶ್ರೇಷ್ಠ ಶಕ್ತಿಗಳು ಹಾಗೆ ಮಾಡಲು ಅವಕಾಶ ನೀಡುವುದಿಲ್ಲ" ಎಂದು ವಾನ್ಸ್ ಸ್ಪಷ್ಟಪಡಿಸಿದ್ದಾರೆ.
"ಟ್ರಂಪ್ ಅವರ ನಾಯಕತ್ವಕ್ಕೆ ಧನ್ಯವಾದ. ಅಮೆರಿಕ ಮತ್ತೆ ಪ್ರಬಲ ಶಕ್ತಿಯಾಗುತ್ತಿದೆ. ಎಲ್ಲರೂ ಇದನ್ನು ಗಮನಿಸಬೇಕು" ಎಂದು ವಾನ್ಸ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಈ ಮಧ್ಯೆ ಶ್ವೇತಭವನದ ಆಡಳಿತ ಮುಖ್ಯಸ್ಥ ಸ್ಟೀಫನ್ ಮಿಲ್ಲರ್ ಸಿಎನ್‍ಎನ್‍ನಲ್ಲಿ "ನೀವು ಯಾವುದೇ ಅಂತರರಾಷ್ಟ್ರೀಯ ಸೂಕ್ಷ್ಮತೆಯ ಬಗ್ಗೆ ಮಾತನಾಡಬಹುದು. ಆದರೆ ನಾವು ಸಾಮಥ್ರ್ಯ ಆಧರಿತ ನೈಜ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ. ಇದು ವಿಶ್ವದ ಆರಂಭದಿಂದಲೂ ರೂಢಿಯಲ್ಲಿರುವ ಮುರಿಯಲಾಗದ ಕಾನೂನುಗಳು" ಎಂದು ಹೇಳಿದ್ದಾರೆ.