ಮಿನಿಯಾಪೊಲೀಸ್‍ನಲ್ಲಿ ಫೆಡರಲ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಬಂಧಿಸುವಂತಿಲ್ಲ: ಕೋರ್ಟ್ ತೀರ್ಪು
ನ್ಯೂಯಾರ್ಕ್, ಜ.17: ಮಿನಿಯಾಪೊಲೀಸ್‍ನಲ್ಲಿ ಅಮೆರಿಕಾದ ವಲಸೆ ಜಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿರುವ ಫೆಡರಲ್ ಅಧಿಕಾರಿಗಳು ಶಾಂತಿಯುತ ಪ್ರತಿಭಟನಾಕಾರರನ್ನು ಬಂಧಿಸಲು ಅಥವಾ ಅಶ್ರುವಾಯು ಪ್ರಯೋಗಿಸಲು ಸಾಧ್ಯವಿಲ್ಲ ಎಂದು ಮಿನ್ನೆಸೊಟಾದ ನ್ಯಾಯಾಧೀಶರು ಶುಕ್ರವಾರ ತೀರ್ಪು ನೀಡಿದ್ದಾರೆ.
ಡಿಸೆಂಬರ್‌ನಲ್ಲಿ ಮಿನ್ನೆಸೋಟಾದ ಆರು ಕಾರ್ಯಕರ್ತರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ. ಮಿನಿಯಾಪೊಲೀಸ್ ಮತ್ತು ಸೈಂಟ್ ಪಾಲ್ ಪ್ರದೇಶದಲ್ಲಿ ವಲಸೆ ಮತ್ತು ಸುಂಕ ಜಾರಿ ಇಲಾಖೆ ಹಾಗೂ ಗಸ್ತು ಅಧಿಕಾರಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದಕ್ಕಾಗಿ ಹಲವರ ವಿರುದ್ದ ಪ್ರಕರಣ ದಾಖಲಾಗಿದೆ. ಅವಳಿ ನಗರಗಳಲ್ಲಿ ಅಧಿಕಾರಿಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದಲ್ಲಿ ಹಲವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಗಿದೆ.
ನಗರಗಳ ನಿವಾಸಿಗಳ ಸಾಂವಿಧಾನಿಕ ಹಕ್ಕುಗಳನ್ನು ಸರಕಾರಿ ಅಧಿಕಾರಿಗಳು ಉಲ್ಲಂಘಿಸುತ್ತಿದ್ದಾರೆ ಎಂದು ಕಾರ್ಯಕರ್ತರು ನ್ಯಾಯಾಲಯದಲ್ಲಿ ವಾದಿಸಿದ್ದರು. ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಟ್ರಿಸಿಯಾ ಮ್ಯಾಕ್‍ಲಾಘ್ಲಿನ್ `ತಮ್ಮ ಏಜೆನ್ಸಿ ಕಾನೂನಿನ ನಿಯಮಗಳನ್ನು ಎತ್ತಿಹಿಡಿಯಲು ಮತ್ತು ನಮ್ಮ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಅಪಾಯಕಾರಿ ಗಲಭೆಕೋರರಿಂದ ರಕ್ಷಿಸಲು ಸೂಕ್ತ ಮತ್ತು ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳುತ್ತದೆ' ಎಂದಿದ್ದಾರೆ.