ಅಮೆರಿಕ| ವಲಸೆ ಅಧಿಕಾರಿಯ ಗುಂಡೇಟಿನಿಂದ ಮಹಿಳೆ ಮೃತ್ಯು; ವ್ಯಾಪಕ ಪ್ರತಿಭಟನೆ
ನ್ಯೂಯಾರ್ಕ್, ಜ.8: ಅಮೆರಿಕಾದ ಮಿನ್ನಿಯಾಪೊಲೀಸ್ ನಗರದ ರಸ್ತೆಯಲ್ಲಿ ವಲಸೆ ಅಧಿಕಾರಿಯೊಬ್ಬರು ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ವ್ಯಾಪಕ ಪ್ರತಿಭಟನೆ ನಡೆದಿದ್ದು ಆಕೆ ದೇಶೀಯ ಭಯೋತ್ಪಾದಕಿ ಎಂಬ ಶ್ವೇತಭವನದ ಪ್ರತಿಪಾದನೆಯನ್ನು ಸ್ಥಳೀಯ ನಾಯಕರು ತಿರಸ್ಕರಿಸಿದ್ದಾರೆ.
ಮೃತಪಟ್ಟ ಮಹಿಳೆಯನ್ನು 37 ವರ್ಷದ ರಿನೀ ನಿಕೊಲೆ ಗುಡ್ ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಈಕೆ ಚಲಾಯಿಸುತ್ತಿದ್ದ ಕಾರನ್ನು ವಲಸೆ ಅಧಿಕಾರಿಗಳು ಸುತ್ತುವರಿದಾಗ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಅಧಿಕಾರಿಯೊಬ್ಬರು ತನ್ನ ಪಿಸ್ತೂಲಿನಿಂದ ಅತೀ ಹತ್ತಿರದಿಂದ ಗುಂಡು ಹಾರಿಸಿದ್ದಾರೆ. ಮಾಸ್ಕ್ ಧರಿಸಿದ್ದ ವಲಸೆ ಮತ್ತು ಸುಂಕ ಜಾರಿ ಏಜೆನ್ಸಿ(ಐಸಿಇ) ಅಧಿಕಾರಿಯೊಬ್ಬರು ಹೋಂಡಾ ಕಾರಿನತ್ತ ಮೂರು ಸುತ್ತು ಗುಂಡು ಹಾರಿಸಿದಾಗ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗುತ್ತಿರುವ, ಅಪಘಾತಕ್ಕೀಡಾದ ವಾಹನದಲ್ಲಿ ರಿನೀ ಅವರ ರಕ್ತಸಿಕ್ತ ದೇಹ ಬಿದ್ದಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ದುರಂತದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಟ್ರಂಪ್ ಆಡಳಿತ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು ರಿನೀ ವಲಸೆ ಅಧಿಕಾರಿಯನ್ನು ಕೊಲ್ಲಲು ಪ್ರಯತ್ನಿಸಿದಾಗ ಅಧಿಕಾರಿ ಆತ್ಮರಕ್ಷಣೆಗೆ ಗುಂಡು ಹಾರಿಸಿರುವುದಾಗಿ ಪ್ರತಿಪಾದಿಸಿದೆ. ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಿನ್ನಿಯಾಪೊಲೀಸ್ ನಗರದ ಮೇಯರ್ ಜಾಕೊಬ್ ಫ್ರೆ `ಐಸಿಇ ತಕ್ಷಣ ನಗರದಿಂದ ನಿರ್ಗಮಿಸಬೇಕು' ಎಂದು ಆಗ್ರಹಿಸಿದ್ದಾರೆ. ಬಳಿಕ ಸಾವಿರಾರು ಮಂದಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು ಐಸಿಇ ವಿರುದ್ದ ಘೋಷಣೆ ಕೂಗಿದರು.
`ಪ್ರಾಣಹಾನಿ ಸಂಭವಿಸಿದ್ದು ನಿಜವಾಗಿಯೂ ದುರಂತವಾಗಿದೆ. ಆದರೆ ಇದು ದೇಶೀಯ ಭಯೋತ್ಪಾದನೆಗೆ ಸಂಬಂಧಿಸಿದ ಘಟನೆಯಾಗಿದ್ದು ರಿನೀ ಇಡೀ ದಿನ ಐಸಿಇ ಸಿಬ್ಬಂದಿಗಳ ಕಾರ್ಯಕ್ಕೆ ಅಡ್ಡಿಪಡಿಸುತ್ತಾ ಬೆದರಿಕೆ ಒಡ್ಡುತ್ತಿದ್ದರು. ಬಳಿಕ ತನ್ನ ವಾಹನವನ್ನು ಅಧಿಕಾರಿಯತ್ತ ಅಪಾಯಕಾರಿಯಾಗಿ ನುಗ್ಗಿಸಿದ್ದರು ' ಎಂದು ಆಂತರಿಕ ಭದ್ರತಾ ಇಲಾಖೆಯ ಮುಖ್ಯಸ್ಥೆ ಕ್ರಿಸ್ಟಿ ನೊಯೆಮ್ ಹೇಳಿರುವುದಾಗಿ ವರದಿಯಾಗಿದೆ.