ಅಮೆರಿಕ ವಿಧಿಸುತ್ತಿರುವ ಸುಂಕಗಳಿಂದ ಮೋದಿಗೆ ಅಸಮಾಧಾನ: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : AP \ PTI
ಹೊಸದಿಲ್ಲಿ/ವಾಷಿಂಗ್ಟನ್: ರಷ್ಯಾದ ತೈಲ ಖರೀದಿಗೆ ಸಂಬಂಧಿಸಿ ಅಮೆರಿಕ ಭಾರತದ ಮೇಲೆ ವಿಧಿಸಿರುವ ಸುಂಕಗಳ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಗ್ಗೆ ‘ಅಷ್ಟು ಸಂತೋಷವಾಗಿಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮಂಗಳವಾರ ಹೌಸ್ ಜಿಒಪಿ ಸದಸ್ಯರ ರಿಟ್ರೀಟ್‌ನಲ್ಲಿ ಮಾತನಾಡಿದ ಟ್ರಂಪ್, ಅಮೆರಿಕ ವಿಧಿಸಿರುವ ಸುಂಕಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನಗೊಂಡಿದ್ದಾರೆ ಎಂದು ತಿಳಿಸಿದರು.
‘‘ಪ್ರಧಾನಿ ಮೋದಿ ನನ್ನನ್ನು ಭೇಟಿಯಾಗಲು ಬಂದಿದ್ದರು. ‘ಸರ್, ದಯವಿಟ್ಟು ನಾನು ನಿಮ್ಮನ್ನು ಭೇಟಿ ಮಾಡಬಹುದೇ’ ಎಂದು ಕೇಳಿದರು. ನನಗೆ ಅವರೊಂದಿಗೆ ಉತ್ತಮ ಸಂಬಂಧವಿದೆ. ಆದರೆ ಅವರು ನನ್ನ ಬಗ್ಗೆ ಅಷ್ಟು ಸಂತೋಷವಾಗಿಲ್ಲ. ಕಾರಣ, ಅವರು ಈಗ ಬಹಳಷ್ಟು ಸುಂಕಗಳನ್ನು ಪಾವತಿಸುತ್ತಿದ್ದಾರೆ. ಭಾರತ ತೈಲ ಉತ್ಪಾದಿಸುವುದಿಲ್ಲ. ಆದರೆ ರಷ್ಯಾದಿಂದ ತೈಲ ಖರೀದಿಯನ್ನು ಈಗ ಗಣನೀಯವಾಗಿ ಕಡಿಮೆ ಮಾಡಿದೆ’’ ಎಂದು ಟ್ರಂಪ್ ಹೇಳಿದರು.
ಭಾರತದ ಮೇಲೆ ಅಮೆರಿಕ ಶೇ.50ರಷ್ಟು ಸುಂಕಗಳನ್ನು ವಿಧಿಸಿದ್ದು, ಅದರಲ್ಲಿ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ ಶೇ.25ರಷ್ಟು ಹೆಚ್ಚುವರಿ ಸುಂಕವೂ ಸೇರಿದೆ ಎಂದು ಟ್ರಂಪ್ ವಿವರಿಸಿದರು.