ಯೆಮನ್‍ನ ಪ್ರತ್ಯೇಕತಾವಾದಿ ನಾಯಕ ಅಲ್-ಝುಬೈದಿ ಅಬುಧಾಬಿಗೆ ಪಲಾಯನ: ವರದಿ
PC: m.economictimes
ದುಬೈ, ಜ.8: ಯೆಮನ್‍ನ `ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್'(ಎಸ್‍ಟಿಸಿ) ನಾಯಕ ಐಡಾರಸ್ ಅಲ್-ಝುಬೈದಿ ರಿಯಾದ್‍ನಲ್ಲಿ ಯೋಜಿತ ಶಾಂತಿ ಮಾತುಕತೆಯನ್ನು ತಪ್ಪಿಸಿಕೊಂಡು ಸೊಮಾಲಿಯಾದ ಮೊಗದಿಶುವಿನಿಂದ ವಿಮಾನದ ಮೂಲಕ ಅಬುಧಾಬಿಗೆ ಪಲಾಯನ ಮಾಡಿದ್ದಾರೆ. ಯುಎಇ ಅವರನ್ನು ಯೆಮನ್‍ನಿಂದ `ಕಳ್ಳಸಾಗಣೆ' ಮಾಡಿದೆ ಎಂದು ಯೆಮನ್‍ನಲ್ಲಿ ಸೌದಿ ಅರೇಬಿಯಾ ನೇತೃತ್ವದ ಒಕ್ಕೂಟವು ಗುರುವಾರ ಆರೋಪಿಸಿದೆ.
ಬುಧವಾರ ತಡರಾತ್ರಿ ಯೆಮನ್‍ನ ಏಡನ್‍ನಿಂದ ಹೊರಟ ಹಡಗಿನಲ್ಲಿ ಜುಬೈದಿ ಸೊಮಾಲಿಲ್ಯಾಂಡ್‍ನ ಬರ್ಬೆರಾ ಬಂದರಿಗೆ `ಪರಾರಿಯಾಗಿದ್ದು' ಅಲ್ಲಿಂದ ಯುಎಇ ಅಧಿಕಾರಿಗಳೊಂದಿಗೆ ವಿಮಾನದ ಮೂಲಕ ಸೊಮಾಲಿಯಾದ ರಾಜಧಾನಿ ಮೊಗದಿಶು ತಲುಪಿದ್ದಾರೆ. ಒಮಾನ್ ಕೊಲ್ಲಿಯ ಮೇಲೆ ಸಾಗುವಾಗ ವಿಮಾನವು ತನ್ನ `ಗುರುತು ವ್ಯವಸ್ಥೆ'ಯನ್ನು ಸ್ಥಗಿತಗೊಳಿಸಿ, ಅಬುಧಾಬಿಯ ಅಲ್ ರೀಫ್ ಮಿಲಿಟರಿ ವಿಮಾನನಿಲ್ದಾಣಕ್ಕೆ ಆಗಮಿಸುವ 10 ನಿಮಿಷಗಳ ಮೊದಲು ಮತ್ತೆ ಸಕ್ರಿಯಗೊಳಿಸಿದೆ ಎಂದು ಹೇಳಿಕೆ ತಿಳಿಸಿದೆ. ಸೊಮಾಲಿಯಾದ ರಾಷ್ಟ್ರೀಯ ವಾಯು ಪ್ರದೇಶ ಮತ್ತು ವಿಮಾನ ನಿಲ್ದಾಣವನ್ನು ದೇಶಭ್ರಷ್ಟ ರಾಜಕೀಯ ವ್ಯಕ್ತಿಯ ಪ್ರಯಾಣಕ್ಕೆ ಅನುವು ಮಾಡಿಕೊಡಲು ಅನಧಿಕೃತವಾಗಿ ಬಳಸಿರುವ ವರದಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದು ದೇಶದ ಸಾರ್ವಭೌಮತ್ವದ ಗಂಭೀರ ಉಲ್ಲಂಘನೆಯಾಗುತ್ತದೆ ಎಂದು ಸೊಮಾಲಿಯಾದ ಅಧಿಕಾರಿಗಳು ಹೇಳಿದ್ದಾರೆ.
ಪ್ರಾರಂಭದಲ್ಲಿ ಯೆಮನ್‍ನ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರಕ್ಕೆ ಹೌದಿ ಬಂಡುಕೋರರ ವಿರುದ್ದದ ಹೋರಾಟದಲ್ಲಿ ಸಹಾಯ ಮಾಡಿದ್ದ ಎಸ್‍ಟಿಸಿ, ಬಳಿಕ ದಕ್ಷಿಣ ಯೆಮನ್‍ನಲ್ಲಿ ಸ್ವತಂತ್ರ ರಾಷ್ಟ್ರಕ್ಕಾಗಿ ಪ್ರಯತ್ನ ನಡೆಸುತ್ತಿದ್ದು ಹದ್ರಾಮೌಟ್ ಮತ್ತು ಅಲ್-ಮಹ್ರಾ ಪ್ರಾಂತಗಳನ್ನು ವಶಪಡಿಸಿಕೊಂಡಿದೆ.