×
Ad

ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ಹಿಂದಿರುಗುವ ದಿನಾಂಕ ಪ್ರಕಟಿಸಿದ ನಾಸಾ

Update: 2025-03-17 10:57 IST

Photo credit: PTI

ಹೊಸದಿಲ್ಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಒಂಭತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅವರು ಅಮೆರಿಕದ ಸ್ಥಳೀಯ ಕಾಲಮಾನ ಮಂಗಳವಾರ ಸಂಜೆ 5.57ಕ್ಕೆ ಭೂಮಿಗೆ ವಾಪಾಸ್ಸಾಗಲಿದ್ದಾರೆ ಎಂದು ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಖಚಿತಪಡಿಸಿದೆ.

ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ರಾಫ್ಟ್‌ನಲ್ಲಿ ಭೂಮಿಗೆ ವಾಪಾಸ್ಸು ಕರೆತರಲಾಗುತ್ತಿದೆ. ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ರಾಫ್ಟ್‌ ರವಿವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿತ್ತು. ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ನಾಸಾ ಈ ಕುರಿತು ಪೋಸ್ಟ್ ಮಾಡಿದ್ದು, ಗಗನಯಾತ್ರಿಗಳನ್ನು ಯಶಸ್ವಿಯಾಗಿ ಭೂಮಿಗೆ ಕರೆತರುವ ಕೆಲಸ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ಐಎಸ್ಎಸ್) ಆರಂಭವಾಗಿದೆ ಎಂದು ತಿಳಿಸಿದೆ.

ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್, ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೊರ್ಬನೊವ್ ಅವರೂ ಭೂಮಿಗೆ ಮರಳಲಿದ್ದಾರೆ. ನಾಲ್ವರನ್ನು ಹೊತ್ತ ಗಗನನೌಕೆಯು ಫ್ಲಾರಿಡಾದ ಕಡಲ ತೀರಕ್ಕೆ ಮಂಗಳವಾರ ಬಂದಿಳಿಯುವ ಸಾಧ್ಯತೆಯಿದೆ.

2024ರ ಜೂನ್ 5ರಂದು ಬೋಯಿಂಗ್ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. 8 ದಿನಗಳ ಕಾರ್ಯಾಚರಣೆಗಾಗಿ ತೆರಳಿದ್ದ ಇವರು ಆ ಬಳಿಕ ಭೂಮಿಗೆ ಮರಳಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳಿಂದ ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಸ್ಟಾರ್‌ಲೈನರ್‌ ಭೂಮಿಗೆ ಮರಳಿತು.

ಇದಾದ ಬಳಿಕ ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಪ್ರಯತ್ನ ಹಲವು ಬಾರಿ ನಡೆದಿದ್ದವು. ಆದರೆ, ಅದು ವಿಫಲವಾಗಿತ್ತು. ಇದೀಗ ನಾಸಾ ಮತ್ತು ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಜಂಟಿ ಕಾರ್ಯಾಚರಣೆಯು ಗಗನಯಾತ್ರಿಗಳನ್ನು ಯಶಸ್ವಿಯಾಗಿ ಭೂಮಿಗೆ ಕರೆ ತರುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News