ಸೌದಿ ಆರೇಬಿಯಾಗೆ ನೌಕಾ ದಿಗ್ಬಂಧನ |ಕೆಂಪು ಸಮುದ್ರದ ಹಡಗುಗಳ ಮೇಲೆ ಶುಲ್ಕ ವಿಧಿಸಲು ಹೌತಿಗಳ ಸಿದ್ಧತೆ
ಸಾಂದರ್ಭಿಕ ಚಿತ್ರ | Photo Credit : PTI
ಸನಾ, ಜು.29: ಸೌದಿ ಅರೇಬಿಯಾ ವಿರುದ್ಧ ನೌಕಾ ದಿಗ್ಬಂಧನವನ್ನು ಘೋಷಿಸಿರುವ ಯೆಮೆನ್‌ನ ಹೌತಿ ಬಂಡುಕೋರರು, ಇದೀಗ ದಕ್ಷಿಣ ಕೆಂಪು ಸಮುದ್ರದ ಮೂಲಕ ಹಾದುಹೋಗುವ ವಾಣಿಜ್ಯ ಹಡಗುಗಳ ಮೇಲೆ ’ಸಂಚಾರ ಶುಲ್ಕ’ ವಿಧಿಸಲು ಚಿಂತನೆ ನಡೆಸಿದ್ದಾರೆ ಎಂದು ಸುದ್ದಿ ಸಂಸ್ಥೆ ‘ರಾಯಿಟರ್ಸ್’ ವರದಿ ಮಾಡಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಇರಾನ್ ಬೆಂಬಲಿತ ಹೌತಿ ಪಡೆಗಳು ವಲಯದಲ್ಲಿದ್ದ ಅಮೆರಿಕದ ಮಿತ್ರರಾಷ್ಟ್ರಗಳ ವಿರುದ್ಧ ಹೊಸ ಸಮರ ರಂಗವನ್ನು ತೆರೆದಿವೆ. ಇದಲ್ಲದೆ, ಗಲ್ಫ್ ಪ್ರದೇಶದ ಆಚೆಗೆ ತೈಲ ಮತ್ತು ಇತರ ಸರಕುಗಳನ್ನು ಸಾಗಿಸುವ ನೌಕೆಗಳ ಮೇಲೆಯೂ ಹೌತಿಗಳು ದಾಳಿ ನಡೆಸುತ್ತಿದ್ದಾರೆ.
ದಕ್ಷಿಣ ಕೆಂಪು ಸಮುದ್ರವನ್ನು ಲಾಹಿಜ್ ಮತ್ತು ಏಡೆನ್ ಕೊಲ್ಲಿಯೊಂದಿಗೆ ಜೋಡಿಸುವ ’ಬಾಬ್ ಎಲ್-ಮಂಡೇಬ್’ ಕಿರಿದಾದ ಜಲಸಂಧಿಯ ಮೂಲಕ ಚಲಿಸುವ ಹೆಚ್ಚಿನ ಹಡಗುಗಳಿಗೆ ದಂಡ ಅಥವಾ ಶುಲ್ಕ ವಿಧಿಸುವ ಯೋಜನೆಗಳನ್ನು ಹೌತಿಗಳು ಪರಿಶೀಲಿಸುತ್ತಿದ್ದಾರೆ. ಆದರೆ, ಈ ನಿಯಮ ಹಾಗೂ ಶುಲ್ಕ ಜಾರಿಗೆ ತರಲು ಯಾವುದೇ ಅಂತಿಮ ಕಾಲಮಿತಿಯನ್ನು ಇನ್ನೂ ನಿಗದಿಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಜುಲೈನಲ್ಲಿ ಇರಾನ್ ದೇಶದ ದಿವಂಗತ ನಾಯಕ ಆಯತುಲ್ಲಾ ಖಾಮಿನೈ ಅವರ ಅಂತ್ಯಕ್ರಿಯೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇರಾನ್‌ಗೆ ತೆರಳಿದ್ದ ಹೌತಿ ಹೋರಾಗಾರರ ನಿಯೋಗವು, ಇರಾನ್ ಅಧಿಕಾರಿಗಳೊಂದಿಗೆ ಈ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಸಿದೆ. ಬಾಬ್ ಎಲ್-ಮಂಡೇಬ್ ಜಲಸಂಧಿಯಲ್ಲಿ ಚಲಿಸುವ ಹಡಗುಗಳನ್ನು ನಿಯಂತ್ರಿಸಲು ಮತ್ತು ಅವುಗಳಿಂದ ದಂಡ, ಶುಲ್ಕ ವಸೂಲಿ ಮಾಡಲು ಪ್ರತ್ಯೇಕ ಪ್ರಾಧಿಕಾರವನ್ನು ರಚಿಸುವಂತೆ ಇರಾನ್ ಅಧಿಕಾರಿಗಳು ಹೌತಿಗಳಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ಹೊಸ ಕ್ರಮದ ಮೂಲಕ ಅಮೆರಿಕ ಹಾಗೂ ಅದರ ಮಿತ್ರ ದೇಶಗಳ ಮೇಲೆ ಜಾಗತಿಕ ವಾಣಿಜ್ಯ ಮಟ್ಟದಲ್ಲಿ ಮತ್ತಷ್ಟು ಒತ್ತಡ ಹೇರುವುದು ಹೌತಿಗಳ ಮುಖ್ಯ ಉದ್ದೇಶವೆಂದು ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷರು ತಿಳಿಸಿದ್ದಾರೆ.