ರಷ್ಯಾ ನಿರ್ಬಂಧ ಮಸೂದೆಗೆ ಅಮೆರಿಕ ಸೆನೆಟ್ ಅಂಕಿತ : ಭಾರತ, ಚೀನಾ ಸರಕುಗಳ ಮೇಲೆ ಶೇ. 100ರಷ್ಟು ಸುಂಕ ಸನ್ನಿಹಿತ?

Update: 2026-07-29 21:50 IST

ಸಾಂದರ್ಭಿಕ ಚಿತ್ರ(AI)

ವಾಷಿಂಗ್ಟನ್, ಜು.29: ರಷ್ಯಾದಿಂದ ಇಂಧನ ಖರೀದಿಸುವ ಪ್ರಮುಖ ದೇಶಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲು ಮತ್ತು ಇರಾನ್ ಮೇಲಿನ ದಂಡನೆಯನ್ನು ವಿಸ್ತರಿಸಲು ಉದ್ದೇಶಿಸಿರುವ ಬಹುನಿರೀಕ್ಷಿತ ದ್ವಿಪಕ್ಷೀಯ ಮಸೂದೆಗೆ ಅಮೆರಿಕದ ಸೆನೆಟ್ ಅನುಮೋದನೆ ನೀಡಿದೆ. ದಿವಂಗತ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಪ್ರಯತ್ನದಿಂದ ಸಿದ್ಧಗೊಂಡಿದ್ದ ಈ ಕರಡು ಮಸೂದೆಯು, ರಷ್ಯಾದಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಖರೀದಿಸುವ ಭಾರತ ಹಾಗೂ ಚೀನಾ ಸೇರಿದಂತೆ ವಿಶ್ವದ ಪ್ರಮುಖ ಐದು ದೇಶಗಳ ಸರಕುಗಳ ಮೇಲೆ ಶೇ. 100ರಷ್ಟು ಸುಂಕ ಹೇರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುತ್ತದೆ.

ಸೆನೆಟ್‌ನಲ್ಲಿ ನಡೆದ ಮತದಾನದಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದು, ಮಸೂದೆಯು 86-12 ಮತಗಳ ಭಾರಿ ಬಹುಮತದೊಂದಿಗೆ ಅಂಗೀಕಾರಗೊಂಡಿದೆ. ಮಸೂದೆ ಅಂಗೀಕಾರಗೊಳ್ಳಲು ಕನಿಷ್ಠ 60 ಮತಗಳ ಅಗತ್ಯವಿದೆ.

ಇತ್ತೀಚೆಗಷ್ಟೇ ಹಠಾತ್ತನೆ ನಿಧನರಾಗಿದ್ದ ರಿಪಬ್ಲಿಕನ್ ಪಕ್ಷದ ಹಿರಿಯ ನಾಯಕ ಲಿಂಡ್ಸೆ ಗ್ರಹಾಂ ಅವರ ಸ್ಮರಣಾರ್ಥ ವಾಷಿಂಗ್ಟನ್‌ನಲ್ಲಿ ನೆರವೇರಿದ ಶ್ರದ್ಧಾಂಜಲಿ ಸಭೆ ಮತ್ತು ಅಮೆರಿಕ ಸಂಸತ್ತಿನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಅವರ ಭೇಟಿಯ ಬೆನ್ನಲ್ಲೇ ಈ ಮಸೂದೆಗೆ ಸೆನೆಟ್‌ನಲ್ಲಿ ಒಪ್ಪಿಗೆ ಸಿಕ್ಕಿರುವುದು ಗಮನಾರ್ಹವಾಗಿದೆ.

ಮಸೂದೆಯಲ್ಲಿ ಏನಿದೆ?

ನೂತನ ಮಸೂದೆಯು ರಷ್ಯಾದ ಅಧಿಕಾರಿಗಳು, ಉದ್ಯಮಿಗಳು, ಹಣಕಾಸು ಸಂಸ್ಥೆಗಳು ಮತ್ತು ರಷ್ಯಾದ ತೈಲ ರಫ್ತು ಮೇಲಿನ ನಿರ್ಬಂಧಗಳನ್ನು ತಪ್ಪಿಸಲು ಬಳಸಲಾಗುವ ’ಶ್ಯಾಡೋ ಫ್ಲೀಟ್’ (ರಹಸ್ಯವಾಗಿ ಸಂಚರಿಸುವ ಹಡಗುಗಳು) ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುತ್ತದೆ. ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಮತ್ತು ಅನಿಲವನ್ನು ಖರೀದಿಸುವ ಭಾರತ ಮತ್ತು ಚೀನಾ ಮತ್ತಿತರ ದೇಶಗಳ ಉತ್ಪನ್ನಗಳ ಮೇಲೆ ಶೇ. 100ರಷ್ಟು ವಾಣಿಜ್ಯ ಸುಂಕವನ್ನು ಹೇರಲು ಅಧ್ಯಕ್ಷ ಟ್ರಂಪ್‌ಗೆ ಇದು ಮುಕ್ತ ಅಧಿಕಾರ ನೀಡುತ್ತದೆ.

ಆದಾಗ್ಯೂ, ತಮ್ಮ ದೇಶದ ಒಟ್ಟು ನೈಸರ್ಗಿಕ ಅನಿಲದ ಶೇ.15ಕ್ಕಿಂತ ಕಡಿಮೆ ಭಾಗವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುವ ಮತ್ತು ಈ ಆಮದನ್ನು ಹಂತ ಹಂತವಾಗಿ ಕಡಿಮೆ ಮಾಡಲು ಕ್ರಮ ಕೈಗೊಳ್ಳುವ ರಾಷ್ಟ್ರಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಇರಾನ್‌ನ ಇಂಧನ ಮತ್ತು ಶಸ್ತ್ರಾಸ್ತ್ರ ಕ್ಷೇತ್ರಗಳಿಗೆ ಧನಸಹಾಯ ತಡೆಯುವ ಹಳೆಯ ನಿರ್ಬಂಧಗಳನ್ನೂ ಮಸೂದೆಯಲ್ಲಿ ವಿಸ್ತರಿಸಲಾಗಿದೆ.

ರಷ್ಯಾದ ಇಂಧನ ಆದಾಯದ ಮೂಲಗಳನ್ನು ತಡೆಹಿಡಿಯುವ ಮಾಡುವ ಮೂಲಕ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸೇನಾ ಶಕ್ತಿಯನ್ನು ಕುಗ್ಗಿಸುವುದು ಈ ಕಠಿಣ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಸೆನೆಟರ್‌ಗಳು ತಿಳಿಸಿದ್ದಾರೆ.

ಆದರೆ, ಕೆಲವು ಡೆಮಾಕ್ರಟಿಕ್ ಪಕ್ಷದ ನಾಯಕರು ಈ ಸುಂಕ ವಿಧಿಸುವ ಅಧಿಕಾರವನ್ನು ಅಧ್ಯಕ್ಷ ಟ್ರಂಪ್‌ಗೆ ನೀಡುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ಅಮೆರಿಕದ ಗ್ರಾಹಕರಿಗೆ ಆಮದು ವೆಚ್ಚ ಹೆಚ್ಚಾಗಬಹುದು ಹಾಗೂ ಯುರೋಪಿಯನ್ ಮಿತ್ರ ರಾಷ್ಟ್ರಗಳ ಮೇಲೆಯೂ ಪರಿಣಾಮ ಬೀರಬಹುದು ಎಂದು ಅವರು ವಾದಿಸಿದ್ದಾರೆ.

ಸೆನೆಟ್‌ನಲ್ಲಿ ಅಂಗೀಕಾರಗೊಂಡಿರುವ ಈ ಮಸೂದೆಯು ಅಂತಿಮ ಕಾನೂನಾಗಿ ಬದಲಾಗಲು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ( ಪ್ರತಿನಿಧಿ ಸಭೆ)ನ ಅನುಮೋದನೆ ಪಡೆದು, ಅಧ್ಯಕ್ಷರ ಅಂಕಿತ ದೊರೆಯಬೇಕಾಗುತ್ತದೆ. ಪ್ರತಿನಿಧಿಸಭೆಯ ಸಂಸದರು ಪ್ರಸಕ್ತ ಬೇಸಿಗೆ ರಜೆಯಲ್ಲಿದ್ದು, ಸೆಪ್ಟೆಂಬರ್ ಬಳಿಕವಷ್ಟೇ ಅವರು ಈ ಮಸೂದೆಯನ್ನು ಪರಿಶೀಲಿಸುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News