ರಾವಲ್‌ಕೋಟ್ ಹಿಂಸಾಚಾರ: ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಕಳವಳ

Update: 2026-07-29 21:50 IST

Photo Credit : ANI 

ಇಸ್ಲಾಮಾಬಾದ್, ಜು.29: ಪಾಕ್ ಆಕ್ರಮಿತ ಕಾಶ್ಮೀರದ (ಪಿಓಕೆ)ರಾವಲ್‌ಕೋಟ್‌ನಲ್ಲಿ ಸೋಮವಾರ ನಡೆದ ಹಿಂಸಾಚಾರದಲ್ಲಿ ಹಲವರು ಪ್ರಾಣ ಕಳೆದುಕೊಂಡು, ಅನೇಕರು ಗಾಯಗೊಂಡಿರುವ ಘಟನೆಯ ಕುರಿತು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಶಾಸನಸಭಾ ಚುನಾವಣೆಯ ಮೊದಲ ಹಂತದ ಮತದಾನದ ದಿನದಂದು ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟು ಈ ಹಿಂಸಾಚಾರ ಭುಗಿಲೆದ್ದಿತ್ತು. ಚುನಾವಣಾ ಹಂತಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರತಿಭಟನೆಗಳನ್ನು ನಿಯಂತ್ರಿಸಲು, ಅಧಿಕಾರಿಗಳು ಸಹನೆ ಮತ್ತು ಸಂಯಮ ವಹಿಸಬೇಕೆಂದು ಆಯೋಗ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮನವಿ ಮಾಡಿದೆ.

ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಅಧಿಕಾರಿಗಳ ಕರ್ತವ್ಯ ಎಂಬುದನ್ನು ಒಪ್ಪಿಕೊಂಡ ಆಯೋಗ, ಈ ಕರ್ತವ್ಯವು ಯಾವುದೇ ಕಾರಣಕ್ಕೂ ಜನರ ಬದುಕುವ ಹಕ್ಕು ಅಥವಾ ಶಾಂತಿಯುತವಾಗಿ ಸಭೆ ಸೇರುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವಂತಿರಬಾರದು ಎಂದು ಪ್ರತಿಪಾದಿಸಿದೆ.

ಸರಣಿ ಹಿಂಸಾಚಾರಗಳು ನಡೆಯದಂತೆ ನೋಡಿಕೊಳ್ಳಬೇಕು ಹಾಗೂ ವರದಿಯಾಗಿರುವ ಸಾವುನೋವಿನ ಪ್ರಕರಣಗಳ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಯೋಗ ಆಗ್ರಹಿಸಿದೆ. ಸಂಘರ್ಷವನ್ನು ಬಿಟ್ಟು ಜನರ ಜೀವ ರಕ್ಷಣೆ ಮತ್ತು ಚುನಾವಣಾ ಪ್ರಕ್ರಿಯೆಯ ಮೇಲೆ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸುವುದರತ್ತ ಪಾಕಿಸ್ತಾನ ಸರಕಾರ ಗಮನ ಹರಿಸಬೇಕು ಎಂದು ಆಯೋಗ ತಿಳಿಸಿದೆ.

ಪಿಓಕೆ ಆದ್ಯಂತ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಪಾಕ್ ಮಾನವಹಕ್ಕುಗಳ ಆಯೋಗ ಈ ಹೇಳಿಕೆ ನೀಡಿದೆ. ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ತಡೆದಾಗ ರಾವಲ್‌ಕೋಟ್‌ನಲ್ಲಿ ಹಿಂಸಾತ್ಮಕ ಸಂಘರ್ಷ ಸಂಭವಿಸಿತ್ತು. ಹಲವು ವರದಿಗಳ ಪ್ರಕಾರ, ಪ್ರತಿಭಟನೆ ತೀವ್ರಗೊಂಡಾಗ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ಸಾವುನೋವುಗಳಿಗೆ ಕಾರಣವಾಗಿದೆ.

ಈ ಹಿಂಸಾಚಾರವು ಮೀರ್‌ಪುರಕ್ಕೂ ಹಬ್ಬಿದ್ದು, ಅಲ್ಲಿಯೂ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ಬಲಪ್ರಯೋಗ ಮಾಡಿವೆ ಎಂಬ ಹೊಸ ವರದಿಗಳು ಬಂದಿವೆ. ಭದ್ರತಾಪಡೆಗಳು ಪ್ರತಿಭಟನಾಕಾರರ ಮೇಲೆ ನೇರ ಗುಂಡಿನ ದಾಳಿ ನಡೆಸಲಾಗಿದ್ದು, ಇನ್ನೂ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹಲವು ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ರಾಜಕೀಯ ಗುಂಪುಗಳು ಆರೋಪಿಸಿವೆ.

ಈ ಘಟನೆಗಳು ಮಾನವ ಹಕ್ಕುಗಳ ಸಂಘಟನೆಗಳು, ಹೋರಾಟಗಾರರು ಮತ್ತು ರಾಜಕೀಯ ಸಂಸ್ಥೆಗಳಿಂದ ತೀವ್ರ ಖಂಡನೆಗೆ ಗುರಿಯಾಗಿದ್ದು, ಪಿಓಕೆನಲ್ಲಿ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡಿದ್ದಕ್ಕೆ ಹೊಣೆಗಾರಿಕೆ ವಹಿಸಬೇಕು ಮತ್ತು ಸ್ವತಂತ್ರ ತನಿಖೆ ನಡೆಯಬೇಕೆಂದು ಪಾಕಿಸ್ತಾನ ಸರಕಾರವನ್ನು ಆಗ್ರಹಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News