ಅಮೆರಿಕದ ಪಡೆಗಳ ಮೇಲೆ ಇರಾನ್ ನಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ
►ಎಲ್ಲ ಕ್ಷಿಪಣಿಗಳನ್ನೂ ತಡೆದಿದ್ದೇವೆ: CENTCOM ►ತೈಲ ಬೆಲೆಯಲ್ಲಿ ಭಾರಿ ಏರಿಕೆ
Photo: x.com/nypost
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ಪಡೆಗಳನ್ನು ಗುರಿಯಾಗಿಸಿಕೊಂಡು ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅನೇಕ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮಂಗಳವಾರ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಇದು ಮಧ್ಯಪ್ರಾಚ್ಯದಲ್ಲಿ ನೆಲೆಗೊಂಡಿರುವ ಅಮೆರಿಕದ ಪಡೆಗಳ ವಿರುದ್ಧ ನಡೆದ "ಅನಿರೀಕ್ಷಿತ ದಾಳಿಯ ಪ್ರಯತ್ನ"ವಾಗಿದ್ದು, ಇರಾನ್ ಉಡಾಯಿಸಿದ ಎಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ ಎಂದು CENTCOM ಪ್ರಕಟಣೆಯಲ್ಲಿ ತಿಳಿಸಿದೆ. ಅಮೆರಿಕದ ಪಡೆಗಳು ಸಂಪೂರ್ಣ ಎಚ್ಚರಿಕೆಯಲ್ಲಿದ್ದು, ಯಾವುದೇ ಬೆಳವಣಿಗೆಯನ್ನು ಎದುರಿಸಲು ಹೆಚ್ಚಿನ ಸನ್ನದ್ಧ ಸ್ಥಿತಿಯಲ್ಲಿವೆ ಎಂದೂ ಅದು ಹೇಳಿದೆ.
ಅಮೆರಿಕದ ಸೇನೆ ಇರಾನ್‌ನ ಕ್ಷಿಪಣಿ ದಾಳಿಯನ್ನು ಅಧಿಕೃತವಾಗಿ ದೃಢಪಡಿಸಿದ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ಏರಿಕೆ ಕಂಡಿವೆ. ಅಮೆರಿಕದ ಕಚ್ಚಾ ತೈಲದ ಭವಿಷ್ಯದ ವಹಿವಾಟಿನ ಬೆಲೆ ಶೇಕಡಾ 4ಕ್ಕೂ ಹೆಚ್ಚು ಏರಿಕೆ ಕಂಡು, ಪ್ರತಿ ಬ್ಯಾರೆಲ್ ಗೆ 82 ಡಾಲರ್ ಗಿಂತ ಮೇಲಕ್ಕೆ ತಲುಪಿದೆ.
ಶನಿವಾರ ಇರಾನ್ ಮೇಲಿನ ಅಮೆರಿಕದ ವಾಯುದಾಳಿಗಳನ್ನು ವಾಷಿಂಗ್ಟನ್ ಹಠಾತ್ ಸ್ಥಗಿತಗೊಳಿಸಿದ್ದರಿಂದ ಹಾಗೂ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಮಾತುಕತೆ ಮರು ಆರಂಭವಾಗುವ ಸಾಧ್ಯತೆಗಳ ಕುರಿತ ವರದಿಗಳ ಹಿನ್ನೆಲೆಯಲ್ಲಿ ಮಂಗಳವಾರ ತೈಲ ಬೆಲೆಗಳು ಇಳಿಕೆಯಾಗಿದ್ದವು. ಈ ಬೆಳವಣಿಗೆಗಳನ್ನು ವ್ಯಾಪಾರಿಗಳು ಮತ್ತು ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಆದರೆ, ಅಮೆರಿಕದ ಪಡೆಗಳ ಮೇಲಿನ ಇತ್ತೀಚಿನ ಇರಾನ್‌ನ ಕ್ಷಿಪಣಿ ದಾಳಿಯ ಬಳಿಕ ಜಾಗತಿಕ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಭವಿಷ್ಯದ ವಹಿವಾಟಿನ ಬೆಲೆಯೂ ಏರಿಕೆ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ 88 ಡಾಲರ್‌ಗಿಂತ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ತೈಲ ಮಾರುಕಟ್ಟೆಯಲ್ಲಿ ಮತ್ತೆ ಅನಿಶ್ಚಿತತೆ ಹೆಚ್ಚಾಗಿದೆ.