Photo: x.com/world24x7hr

ಕಿನ್ಶಾಸಾ: ಕಾಂಗೋದ ಕೆಂಗೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಇಬ್ಬರು ಹಿರಿಯ ಮಿಲಿಟರಿ ಅಧಿಕಾರಿಗಳು ಸೇರಿದಂತೆ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಎಂದು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಸೇನೆ ಶುಕ್ರವಾರ ತಿಳಿಸಿದೆ.

ಕಿಕ್ವಿಟ್ನಿಂದ ಕಿನ್ಶಾಸಾಗೆ ಮರಳುತ್ತಿದ್ದ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಇದರಿಂದಲೇ ದುರಂತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಮೃತಪಟ್ಟ ಇಬ್ಬರು ಮಿಲಿಟರಿ ಅಧಿಕಾರಿಗಳನ್ನು ಮಿಲಿಟರಿ ನ್ಯಾಯಾಲಯದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುಟೊಂಬೊ ಕಟಾಲಯಿ ಟಿಯೆಂಡೆ ಮತ್ತು ಸಶಸ್ತ್ರ ಪಡೆಗಳ ಆಡಿಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಬಕುಮಿ ಲಿಕುಲಿಯಾ ಎಂದು ಗುರುತಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ನಿಯೋಗದಲ್ಲಿದ್ದ ಇತರ 12 ಮಂದಿ ಹಾಗೂ ವಿಮಾನ ಸಿಬ್ಬಂದಿಯೂ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಕಾಂಗೋ ಸೇನೆಯ ವಕ್ತಾರ ಮೇಜರ್ ಜನರಲ್ ಎಫೊಮಿ ಎಕೆಂಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೈಋತ್ಯ ಕಾಂಗೋದ ಕಿಕ್ವಿಟ್ನಿಂದ ರಾಜಧಾನಿ ಕಿನ್ಶಾಸಾಗೆ ಮರಳುತ್ತಿದ್ದ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೆಂಗೆಯಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 

ಅಪಘಾತದ ನಿಖರ ಕಾರಣ ಹಾಗೂ ಹಿನ್ನೆಲೆಯನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಎಕೆಂಗೆ ತಿಳಿಸಿದ್ದಾರೆ. 

ವಿಮಾನ ಪತನಕ್ಕೆ ತಕ್ಷಣದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಕಾಂಗೋದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಂಡಳಿ ಅಧ್ಯಕ್ಷ ಟ್ರೈಫೋನ್ ಕಿನ್-ಕಿ ಮುಲುಂಬಾ ಹೇಳಿದ್ದಾರೆ.

ಕಾಂಗೋದ ಪೂರ್ವ ಭಾಗದಲ್ಲಿ ರುವಾಂಡಾ ಬೆಂಬಲಿತ ಎಂ23 ಸೇರಿದಂತೆ ಹಲವು ಬಂಡುಕೋರ ಗುಂಪುಗಳ ವಿರುದ್ಧ ಕಾಂಗೋ ಸೇನೆ ನಿರಂತರವಾಗಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲೇ ಈ ವಿಮಾನ ದುರಂತ ಸಂಭವಿಸಿದೆ. ಇತ್ತೀಚೆಗೆ ಬಂಡುಕೋರರ ಸರಣಿ ದಾಳಿಗಳು ತೀವ್ರಗೊಂಡು ಹಲವು ಪ್ರಮುಖ ನಗರಗಳನ್ನು ವಶಪಡಿಸಿಕೊಂಡ ಬಳಿಕ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor