×
Ad

ಇಂಡಿಯಾ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟು; ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿರುವ ಹೇಮಂತ್ ಸೊರೇನ್ ರ ಜೆಎಂಎಂ ಪಕ್ಷ

“ಸ್ನೇಹಪರ ಹೋರಾಟವಿಲ್ಲ, ಶತ್ರು ಶತ್ರುವೇ” ಎಂದ ಪಕ್ಷದ ಪ್ರಧಾನ ಕಾರ್ಯದರ್ಶಿ

Update: 2025-10-19 00:05 IST

Photo Credit : NDTV

ಪಾಟ್ನಾ, ಅ. 18: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ವಿರೋಧ ಪಕ್ಷಗಳ ಮಹಾ ಮೈತ್ರಿಕೂಟದಲ್ಲಿ ಮತ್ತೊಂದು ಬಿರುಕು ಮೂಡಿಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ನಾವು ಬಲಿಷ್ಠವಾಗಿ ಹೋರಾಡುತ್ತೇವೆ. ಯಾವುದೇ ‘ಸ್ನೇಹಪರ’ ಹೋರಾಟ ನಡೆಯುವುದಿಲ್ಲ. ಶತ್ರು ಶತ್ರುವೇ,” ಎಂದು ಸ್ಪಷ್ಟಪಡಿಸಿದರು.

“ನಮ್ಮ ಕಾರ್ಯಕರ್ತರು ಕಳೆದ ದಶಕದಿಂದ ಬಿಹಾರದಲ್ಲಿ ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತಿದ್ದಾರೆ. ಅವರ ಮನೋಭಾವ ಹಾಗೂ ಸಂಘಟನೆಯ ಒತ್ತಡವನ್ನು ಪರಿಗಣಿಸಿ, ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಲಾಗಿದೆ,” ಎಂದು ಅವರು ವಿವರಿಸಿದರು.

ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಜೆಎಂಎಂ ಜೊತೆಗೆ ಆಡಳಿತ ಮೈತ್ರಿಕೂಟದಲ್ಲಿದ್ದು, ಬಿಹಾರದಲ್ಲಿಯೂ ಮೈತ್ರಿ ಮುಂದುವರಿಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಆರ್‌ಜೆಡಿ ಹಾಗೂ ಕಾಂಗ್ರೆಸ್ ನಡುವಿನ ಸ್ಥಾನ ಹಂಚಿಕೆ ವಿಚಾರದಲ್ಲಿ ಯಾವುದೇ ತೀರ್ಮಾನವಾಗದ ಕಾರಣ, ಜೆಎಂಎಂ ತನ್ನದೇ ದಾರಿಗೆ ಹಿಡಿದಿದೆ ಎಂದು ತಿಳಿದು ಬಂದಿದೆ.

ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ ಪಕ್ಷವು ಈಗಾಗಲೇ 70 ಸ್ಥಾನಗಳನ್ನು ಕೋರಿಕೊಂಡಿದ್ದು, ಆರ್‌ಜೆಡಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರ ಪರಿಣಾಮವಾಗಿ “ಸ್ನೇಹಪರ ಹೋರಾಟ” ನಡೆಯುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಪವನ್ ಖೇರಾ ಅವರು, “ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿಯ ಅಭ್ಯರ್ಥಿಯನ್ನು ಘೋಷಿಸಲಾಗುತ್ತದೆ,” ಎಂದು ಹೇಳಿ, ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಸಾಧ್ಯತೆ ಕ್ಷೀಣವಾಗಿದೆ ಎಂಬ ಸುಳಿವು ನೀಡಿದ್ದಾರೆ.

ಜೆಎಂಎಂ ಬಿಹಾರದಲ್ಲಿ ಆರು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಚಕೈ, ಧಮ್ದಹಾ, ಕಟೋರಿಯಾ (ಎಸ್‌ಟಿ), ಮಣಿಹರಿ (ಎಸ್‌ಟಿ), ಜಮುಯಿ ಮತ್ತು ಪಿರ್‌ಪೈಂಟಿ ಕ್ಷೇತ್ರಗಳು ಎಂದು ಪಿಟಿಐ ವರದಿ ಮಾಡಿದೆ.

ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೆಎಂಎಂ ಸ್ಪರ್ಧಿಸಲಿರುವ ಎಲ್ಲಾ ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News