ಯುದ್ಧದ ವೇಳೆ ತೈಲ ಮತ್ತು ಅನಿಲ ಪ್ರಮುಖವಾಗಿದೆ: ಸೌದಿ ARAMCO ಸಿಇಒ
ಅಮಿನ್ ನಾಸರ್ | PC : aramco.com
ಕೌಲಾಲಂಪುರ: ಸದ್ಯ ಕಣ್ಣಗೆ ಕಾಣಿಸುತ್ತಿರುವಂತೆ ಕಂಡು ಬರುತ್ತಿರುವ ತೈಲ ಮತ್ತು ಅನಿಲದ ಪ್ರಾಮುಖ್ಯತೆಯನ್ನು ಯುದ್ಧದ ಸಂದರ್ಭದಲ್ಲಿ ಕಡೆಗಣಿಸುವಂತಿಲ್ಲ ಎಂದು ಸೋಮವಾರ ಸೌದಿ ಅರೇಬಿಯಾ ದೈತ್ಯ ತೈಲ ಸಂಸ್ಥೆ ARAMCO ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿನ್ ನಾಸರ್ ಅಭಿಪ್ರಾಯ ಪಟ್ಟರು.
ಮಲೇಷಿಯಾದ ಕೌಲಾಲಂಪುರದಲ್ಲಿ ಆಯೋಜಿಸಲಾಗಿದ್ದ ಎನರ್ಜಿ ಏಶ್ಯ ಕಾನ್ಫರೆನ್ಸ್ ಅನ್ನು ಉದ್ದೇಶಿಸಿ ವಿಡಿಯೊ ಲಿಂಕ್ ಭಾಷಣ ಮಾಡಿದ ಅಮಿನ್ ನಾಸರ್, "ಯುದ್ಧ ಪ್ರಾರಂಭವಾದಾಗ, ತೈಲ ಮತ್ತು ಅನಿಲದ ಪ್ರಾಮುಖ್ಯತೆಯನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂಬುದನ್ನು ಇತಿಹಾಸ ನಮಗೆ ತೋರಿಸಿದೆ" ಎಂದು ಹೇಳಿದರು.
"ನಾವು ಈ ವಾಸ್ತವ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಇಂಧನ ಭದ್ರತೆಯ ಅಪಾಯವು ಜಾಗತಿಕ ಕಳವಳವನ್ನುಂಟು ಮಾಡುವುದು ಮುಂದುವರಿಯಲಿದೆ" ಎಂದು ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷವನ್ನು ನೇರವಾಗಿ ಉಲ್ಲೇಖಿಸದೆ ಅವರು ಅಭಿಪ್ರಾಯ ಪಟ್ಟರು.
ಹೊಸ ಇಂಧನ ಮೂಲಗಳು ಹಳೆಯದಕ್ಕೆ ಪರ್ಯಾಯವಾಗುವುದಿಲ್ಲ, ಬದಲಿಗೆ ಅದರೊಂದಿಗೆ ಮಿಶ್ರಣಗೊಳ್ಳುತ್ತವೆ ಎಂದೂ ಹೇಳಿದ ನಾಸರ್, ಶೂನ್ಯ ಪ್ರಮಾಣದ ಹೊಗೆಗೆ ಪರಿವರ್ತನೆಗೊಳ್ಳುವ ಪ್ರಕ್ರಿಯೆಗೆ 200 ಟ್ರಿಲಿಯನ್ ಡಾಲರ್ ವೆಚ್ಚವಾಗಲಿದ್ದು, ನವೀಕೃತ ಇಂಧನ ಮೂಲಗಳು ಹಾಲಿ ಬೇಡಿಕೆಯನ್ನು ಪೂರೈಸುತ್ತಿಲ್ಲ ಎಂದೂ ತಿಳಿಸಿದರು.
"ಇದರ ಪರಿಣಾಮವಾಗಿ ಇಂಧನ ಭದ್ರತೆ ಹಾಗೂ ಕೈಗೆಟಕುವಿಕೆಯು ಈ ಪರಿವರ್ತನೆಯ ಕೇಂದ್ರ ಗುರಿಯಾಗಿ ಅಂತಿಮವಾಗಿ ಸೇರ್ಪಡೆಯಾಗಿದೆ" ಎಂದೂ ಅವರು ಹೇಳಿದರು.
ಸೌದಿ ಅರೇಬಿಯಾ ಆರ್ಥಿಕತೆಯಲ್ಲಿ ARAMCO ಪ್ರಮುಖ ಭಾಗವಾಗಿದ್ದು, ಸೌದಿ ಅರೇಬಿಯಾದ ಬಹುತೇಕ ಆದಾಯವನ್ನು ತೈಲ ರಫ್ತಿನ ಮೂಲಕ ಗಳಿಸುತ್ತಿದೆ ಹಾಗೂ ತನ್ನ ಮಹತ್ವಾಕಾಂಕ್ಷಿ ವಿಶನ್ 2030 ಪರಿವರ್ತನೀಯ ಅಭಿಯಾನ(Vision 2030 diversification drive)ಕ್ಕೆ ಈ ನಿಧಿಯನ್ನು ಹೂಡಿಕೆ ಮಾಡುತ್ತಿದೆ.
ಈ ನಡುವೆ, ಶುಕ್ರವಾರ ಇರಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ನಂತರ, ಕಳೆದ ವಾರ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.