Images: Reuters/File

ಇಸ್ಲಾಮಾಬಾದ್, ಅ. 11: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದೊಂದಿಗಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಪ್ರಧಾನಿ ಶೆಹಬಾಝ್ ಷರೀಫ್ ನೇತೃತ್ವದ ಫೆಡರಲ್ ಸರಕಾರವು ರವಿವಾರ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ರಾಜ್ಯಪಾಲರ ಆಳ್ವಿಕೆ ಜಾರಿಗೊಳಿಸಿದೆ. ಇದರೊಂದಿಗೆ ಪಿಟಿಐ ಆಡಳಿತದಲ್ಲಿದ್ದ ಕೊನೆಯ ಪ್ರಾಂತೀಯ ಸರಕಾರ ಅಧಿಕಾರ ಕಳೆದುಕೊಂಡಿದೆ.

ಭಯೋತ್ಪಾದನೆ ಹೆಚ್ಚಳ ಮತ್ತು ಸಾಂವಿಧಾನಿಕ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಕಾರಣವಾಗಿ ಉಲ್ಲೇಖಿಸಿ, ಪಾಕಿಸ್ತಾನದ ಸಂವಿಧಾನದ 232 ಮತ್ತು 234ನೇ ವಿಧಿಗಳ ಅಡಿಯಲ್ಲಿ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ ಈ ಕ್ರಮಕ್ಕೆ ಅನುಮೋದನೆ ನೀಡಿದ್ದಾರೆ.

ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಆಗ್ರಹಿಸಿ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ನೇತೃತ್ವದಲ್ಲಿ ಪಿಟಿಐ ‘ಲಾಂಗ್ ಮಾರ್ಚ್’ ಆಯೋಜಿಸಿರುವ ಸಂದರ್ಭದಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನಾಕಾರರು ಇಸ್ಲಾಮಾಬಾದ್‌ ನತ್ತ ಮುನ್ನಡೆಯುವುದನ್ನು ತಡೆಯಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದರು.

ತುರ್ತು ಪರಿಸ್ಥಿತಿ ಘೋಷಣೆಯಾದ ಕೆಲವೇ ಹೊತ್ತಿನಲ್ಲಿ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ಮತ್ತು ಪಕ್ಷದ ಪ್ರಾಂತೀಯ ಅಧ್ಯಕ್ಷ ಜುನೈದ್ ಅಕ್ಬರ್ ಅವರನ್ನು ಬಂಧಿಸಲಾಗಿದೆ ಎಂದು ಪಿಟಿಐ ನಾಯಕರು ಆರೋಪಿಸಿದ್ದಾರೆ. ಅಫ್ರಿದಿ ಮತ್ತು ಅವರ ಕಿರಿಯ ಸಹೋದರನನ್ನು ವಶಕ್ಕೆ ಪಡೆಯಲಾಗಿದೆ ಎಂದು ‘ಸಮಾ ಟಿವಿ’ ವರದಿ ಮಾಡಿದೆ.

‘ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಕೆಪಿ ರಾಜ್ಯಪಾಲ ಫೈಸಲ್ ಕರೀಮ್ ಎಚ್ಚರಿಸಿದ್ದಾರೆ.

‘ಪ್ರಜಾಪ್ರಭುತ್ವ ವಿರೋಧಿ ಕ್ರಮ’

ಪಿಟಿಐ ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಅಲಿ ಖಾನ್ ತುರ್ತು ಪರಿಸ್ಥಿತಿ ಘೋಷಣೆಯನ್ನು ‘ಅತ್ಯಂತ ಆತಂಕಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮ’ ಎಂದು ಖಂಡಿಸಿದ್ದಾರೆ. ಜನರ ಚುನಾವಣಾ ಜನಾದೇಶವನ್ನು ನಿರ್ಲಕ್ಷಿಸಿ, ಪ್ರಾಂತೀಯ ಸ್ವಾಯತ್ತತೆಯನ್ನು ದುರ್ಬಲಗೊಳಿಸುವುದರಿಂದ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪಿಟಿಐ ವಿರೋಧವಿಲ್ಲ. ಆದರೆ, ಪ್ರಾಂತೀಯ ಸ್ವಾಯತ್ತತೆಯನ್ನು ಮೊಟಕುಗೊಳಿಸಲು ಭಯೋತ್ಪಾದನೆ ನಿಗ್ರಹವನ್ನು ನೆಪವಾಗಿ ಬಳಸುವುದನ್ನು ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಿಟಿಐ ಬೆಂಬಲಿಗರು ಇಸ್ಲಾಮಾಬಾದ್‌ ನಿಂದ ಸುಮಾರು 94 ಕಿ.ಮೀ ದೂರದಲ್ಲಿರುವ ಸ್ವಾಬಿ ಇಂಟರ್‌ ಚೇಂಜ್‌ ನತ್ತ ಸಾಗುತ್ತಿದ್ದರು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿತ್ತು.

ಭಯೋತ್ಪಾದನೆ ನಿಯಂತ್ರಣದ ನೆಪ

ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಫೆಡರಲ್ ಸಂಪುಟದ ತುರ್ತು ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಖೈಬರ್ ಪಖ್ತುಂಕ್ವಾದಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP) ಸೇರಿದಂತೆ ವಿವಿಧ ಉಗ್ರಗಾಮಿ ಸಂಘಟನೆಗಳ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿಯನ್ನು ಸಂಪುಟ ಪರಿಶೀಲಿಸಿತು ಎಂದು ‘ಡಾನ್’ ವರದಿ ಮಾಡಿದೆ.

ಭಯೋತ್ಪಾದನೆ ವಿರುದ್ಧದ ಹೋರಾಟದಿಂದ ಪಿಟಿಐ ಆಡಳಿತ ಉದ್ದೇಶಪೂರ್ವಕವಾಗಿ ಹಿಂದೆ ಸರಿದಿದೆ ಎಂದು ಸಂಪುಟ ಆರೋಪಿಸಿದೆ. ‘ದೇಶದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ನಾನು ಬಿಡುವುದಿಲ್ಲ’ ಎಂದು ಷರೀಫ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಭಯೋತ್ಪಾದಕ ದಾಳಿಗಳಲ್ಲಿ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆಗಳನ್ನು ಸರಕಾರ ಪ್ರಸ್ತಾಪಿಸಿದೆ. ಗಡಿಯಾಚೆಯಿಂದ ಉಗ್ರಗಾಮಿ ಸಂಘಟನೆಗಳ ಕಾರ್ಯಾಚರಣೆ ತಡೆಯುವಲ್ಲಿ ಅಫ್ಘಾನಿಸ್ತಾನ ವಿಫಲವಾಗಿದೆ ಎಂಬುದು ಪಾಕಿಸ್ತಾನದ ಮತ್ತೊಂದು ಆರೋಪ.

ಸಂವಿಧಾನದ ವಿಧಿಗಳೇನು ಹೇಳುತ್ತವೆ?

ಸಂವಿಧಾನದ 234ನೇ ವಿಧಿಯ ಪ್ರಕಾರ, ಪ್ರಾಂತ್ಯದಲ್ಲಿ ಸಾಂವಿಧಾನಿಕ ಆಡಳಿತ ವ್ಯವಸ್ಥೆ ವಿಫಲವಾದಾಗ ಅಧ್ಯಕ್ಷರು ಪ್ರಾದೇಶಿಕ ಸರಕಾರದ ಕಾರ್ಯಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬಹುದು ಅಥವಾ ರಾಜ್ಯಪಾಲರ ಮೂಲಕ ನಿರ್ವಹಿಸಲು ನಿರ್ದೇಶಿಸಬಹುದು. ಇದರಿಂದ ಪ್ರಾಂತೀಯ ವಿಧಾನಸಭೆಯ ಅಧಿಕಾರಗಳನ್ನು ಪಾಕಿಸ್ತಾನದ ಸಂಸತ್ತು ಚಲಾಯಿಸಲು ಅವಕಾಶವಿದೆ.

ಯುದ್ಧ, ಬಾಹ್ಯ ಆಕ್ರಮಣ ಅಥವಾ ಆಂತರಿಕ ಅಶಾಂತಿಯಿಂದ ದೇಶದ ಭದ್ರತೆಗೆ ಬೆದರಿಕೆ ಎದುರಾದಾಗ ತುರ್ತು ಪರಿಸ್ಥಿತಿ ಘೋಷಿಸಲು 232ನೇ ವಿಧಿ ಅವಕಾಶ ನೀಡುತ್ತದೆ. ಆಂತರಿಕ ಅಶಾಂತಿಯ ಕಾರಣಕ್ಕೆ ತುರ್ತು ಪರಿಸ್ಥಿತಿ ಘೋಷಿಸಲು ಸಾಮಾನ್ಯವಾಗಿ ಪ್ರಾಂತೀಯ ವಿಧಾನಸಭೆಯ ನಿರ್ಣಯ ಅಗತ್ಯ. ಅಂತಹ ನಿರ್ಣಯವಿಲ್ಲದೆ ಕ್ರಮ ಕೈಗೊಂಡರೆ 10 ದಿನಗಳೊಳಗೆ ಸಂಸತ್ತಿನ ಅನುಮೋದನೆ ಪಡೆಯಬೇಕು.

234ನೇ ವಿಧಿಯಡಿ ಜಾರಿಗೊಳಿಸುವ ರಾಜ್ಯಪಾಲರ ಆಳ್ವಿಕೆಗೆ ಎರಡು ತಿಂಗಳೊಳಗೆ ಸಂಸತ್ತಿನ ಜಂಟಿ ಅಧಿವೇಶನದ ಅನುಮೋದನೆ ಅಗತ್ಯ. ಒಟ್ಟು ಅವಧಿಗೆ ಆರು ತಿಂಗಳ ಮಿತಿ ಇದೆ.

ತುರ್ತು ಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸುವುದಕ್ಕೆ ಸಂಬಂಧಿಸಿದ 233ನೇ ವಿಧಿಯನ್ನು ಅಧ್ಯಕ್ಷೀಯ ಸಾರಾಂಶದಲ್ಲಿ ಉಲ್ಲೇಖಿಸಿಲ್ಲ ಎಂದು ‘ಡಾನ್’ ವರದಿ ಮಾಡಿದೆ. ಹೀಗಾಗಿ, ತುರ್ತು ಪರಿಸ್ಥಿತಿ ಘೋಷಣೆಯಾದ ಮಾತ್ರಕ್ಕೆ ಮೂಲಭೂತ ಹಕ್ಕುಗಳು ಸ್ವಯಂಚಾಲಿತವಾಗಿ ಅಮಾನತುಗೊಂಡಿವೆ ಎಂದು ಹೇಳಲಾಗದು.

ಫೆಡರಲ್ ಸರಕಾರವು ಹಿರಿಯ ಅಧಿಕಾರಿ ಮುಹಮ್ಮದ್ ಫಖರ್ ಅಲಂ ಇರ್ಫಾನ್ ಅವರನ್ನು ಖೈಬರ್ ಪಖ್ತುಂಕ್ವಾದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದೆ.

ಮತ್ತಷ್ಟು ಸಂಘರ್ಷದ ಆತಂಕ

ಶನಿವಾರ ಮರ್ದಾನ್‌ ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ, ಪಠಾಣ್ ಜನರು ಬೆದರಿಕೆ, ಬಂದೂಕು ಅಥವಾ ಗುಂಡುಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದರು. ಇಸ್ಲಾಮಾಬಾದ್‌ ಗೆ ತೆರಳುವ ಮೊದಲು ಮೆರವಣಿಗೆಯನ್ನು ಪೇಶಾವರದತ್ತ ತಿರುಗಿಸುವ ಸಾಧ್ಯತೆಯನ್ನೂ ಅವರು ಪ್ರಸ್ತಾಪಿಸಿದ್ದರು ಎಂದು ಬಿಬಿಸಿ ಉರ್ದು ವರದಿ ಮಾಡಿದೆ.

ಪಿಟಿಐ ವಕ್ತಾರ ಝುಲ್ಫಿಕರ್ ಬುಖಾರಿ ಈ ನಿರ್ಧಾರವನ್ನು ‘ಹಾಸ್ಯಾಸ್ಪದ’ ಎಂದು ಟೀಕಿಸಿದ್ದು, ಇದು ಮತ್ತಷ್ಟು ರಕ್ತಪಾತ ಮತ್ತು ಅಸ್ಥಿರತೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವೂ ಈ ಕ್ರಮವು ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿ, ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ಹೇಳಿದೆ.

ಖೈಬರ್ ಪಖ್ತುಂಕ್ವಾ ಪಿಟಿಐನ ಪ್ರಮುಖ ರಾಜಕೀಯ ಬೆಂಬಲದ ನೆಲೆಯಾಗಿದ್ದು, ಅಫ್ಘಾನಿಸ್ತಾನದ ಗಡಿಯಲ್ಲಿರುವ ಈ ಪ್ರಾಂತ್ಯವು ಭಯೋತ್ಪಾದನೆ ವಿರುದ್ಧದ ಪಾಕಿಸ್ತಾನದ ಹೋರಾಟದಲ್ಲೂ ಮಹತ್ವದ ಪಾತ್ರ ವಹಿಸುತ್ತದೆ.

ಭದ್ರತಾ ಜವಾಬ್ದಾರಿಗಳನ್ನು ಪಿಟಿಐ ಆಡಳಿತ ನಿರ್ಲಕ್ಷಿಸುತ್ತಿದೆ ಎಂಬುದು ಫೆಡರಲ್ ಸರಕಾರದ ಆರೋಪ. ಆದರೆ, ಚುನಾಯಿತ ಪ್ರತಿನಿಧಿಗಳು ಮತ್ತು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಿಲಿಟರಿ ಕಾರ್ಯಾಚರಣೆ ಹಾಗೂ ಭದ್ರತಾ ನೀತಿಗಳನ್ನು ಹೇರಬಾರದು ಎಂಬುದು ಪಿಟಿಐ ವಾದ.

ಅಕ್ಟೋಬರ್ 13ರಂದು ಪಾಕಿಸ್ತಾನದ ರಾಷ್ಟ್ರೀಯ ಸಭೆ ಮತ್ತು ಸೆನೆಟ್ ಸಭೆ ಸೇರಲಿದ್ದು, ತುರ್ತು ಪರಿಸ್ಥಿತಿಯ ಸಾಂವಿಧಾನಿಕ ಹಾಗೂ ರಾಜಕೀಯ ಪರಿಣಾಮಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.

ಭದ್ರತೆಯನ್ನು ಮರುಸ್ಥಾಪಿಸಲು ಈ ಕ್ರಮ ಅಗತ್ಯ ಎಂದು ಸರಕಾರ ಪ್ರತಿಪಾದಿಸುತ್ತಿದ್ದರೆ, ರಾಜಕೀಯ ವಿರೋಧವನ್ನು ಹತ್ತಿಕ್ಕುವ ಪ್ರಯತ್ನ ಎಂದು ಪಿಟಿಐ ಆರೋಪಿಸಿದೆ. ಈಗಾಗಲೇ ಹಿಂಸಾಚಾರ ಮತ್ತು ರಾಜಕೀಯ ವಿಭಜನೆಯನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಈ ಕ್ರಮವು ಸುವ್ಯವಸ್ಥೆ ಮರುಸ್ಥಾಪಿಸಲಿದೆಯೇ ಅಥವಾ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಸೌಜನ್ಯ: indiatoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor