ಯೆಮನ್ ಕರಾವಳಿಯಲ್ಲಿದ್ದ ನೌಕೆ ಸೊಮಾಲಿಯಾಕ್ಕೆ ಅಪಹರಣ
ಸಾಂದರ್ಭಿಕ ಚಿತ್ರ | Photo Credit : aljazeera.com
ಸನಾ, ಆ. 20: ಯೆಮನ್ ಕರಾವಳಿಯಲ್ಲಿ ಆರು ಶಸ್ತ್ರಸಜ್ಜಿತ ವ್ಯಕ್ತಿಗಳು ಹಡಗೊಂದನ್ನು ವಶಕ್ಕೆ ಪಡೆದು, ಅದನ್ನು ಸೊಮಾಲಿಯಾದತ್ತ ತಿರುಗಿಸಿದ್ದಾರೆ. ಯೆಮನ್ನ ಮುಕಲ್ಲಾ ಪೂರ್ವದಲ್ಲಿ ‘ಗಲ್ಫ್ ಆಫ್ ಏಡನ್’ನಲ್ಲಿ ಪಶ್ಚಿಮಕ್ಕೆ ಸಾಗುತ್ತಿದ್ದ ಟ್ಯಾಂಕರ್ ಒಂದನ್ನು ಅನಧಿಕೃತ ದೋಣಿಯೊಂದು ಸಮೀಪಿಸಿದ ನಂತರ ಈ ಘಟನೆ ಸಂಭವಿಸಿದೆ ಎಂದು ಬ್ರಿಟನ್ನ ‘ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್’ ಮಾಹಿತಿ ನೀಡಿದೆ.
ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಕೆಲವು ಬೆಳವಣಿಗೆಗಳು:
• ‘ಯುಎಸ್ಎಸ್ ಜಾರ್ಜ್ ವಾಷಿಂಗ್ಟನ್’ ಸಮರ ನೌಕೆ ನಿಗದಿತ ನಿಯೋಜನೆಯ ಭಾಗವಾಗಿ ಮಧ್ಯಪ್ರಾಚ್ಯಕ್ಕೆ ತಲುಪಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
• ಹಾರ್ಮುಝ್ ಜಲಸಂಧಿಯಲ್ಲಿ ಯಾವುದೇ ಕಡೆಯವರು ಬೆದರಿಕೆ ಅಥವಾ ‘ಬ್ಲ್ಯಾಕ್ಮೇಲ್’ ತಂತ್ರಗಳನ್ನು ಬಳಸದಂತೆ ಖತರ್ ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಎಚ್ಚರಿಸಿದ್ದು, ಈ ಸಂಘರ್ಷವು ಗಲ್ಫ್ ದೇಶಗಳು ಮತ್ತು ಇತರ ಪ್ರದೇಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
• ಯೆಮನ್ ಸರಕಾರಿ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಬ್ಬರು ಸದಸ್ಯರು ಮತ್ತು ಗುಂಪಿಗೆ ಸಂಪರ್ಕ ಹೊಂದಿದ್ದ ಇರಾಕಿ ಪ್ರಜೆಯೊಬ್ಬರು ಹತರಾಗಿದ್ದಾರೆ. ಡ್ರೋನ್ ದಾಳಿಯಲ್ಲಿ ಹೌದಿಗಳ ‘ಥರ್ಡ್ ಬ್ರಿಗೇಡ್’ ಕಮಾಂಡರ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
• ಮಿಲಿಟರಿ ರಂಗದಲ್ಲಿ ವಿಫಲವಾಗಿರುವ ಅಮೆರಿಕ ಈಗ ಇರಾನ್ ವಿರುದ್ಧ ‘ಆರ್ಥಿಕ ಯುದ್ಧ’ಕ್ಕೆ ಇಳಿದಿದೆ ಮತ್ತು ತನ್ನ ಮಿತ್ರರಾಷ್ಟ್ರಗಳ ಬಳಿ ಬೆಂಬಲಕ್ಕಾಗಿ ಬೇಡುತ್ತಿದೆ ಎಂದು ಇರಾನ್ ಉಪ ವಿದೇಶಾಂಗ ಸಚಿವ ಕಾಜೆಮ್ ಗರಿಬಾಬಾದಿ ಟೀಕಿಸಿದ್ದಾರೆ.