Green Card ಸಂದರ್ಶನದ ಅಂತಿಮ ಸುತ್ತಿನಲ್ಲಿ ಭಾರತೀಯ ಮೂಲದ ಮಹಿಳೆಯ ಬಂಧನ; ಫೆಡರಲ್ ಅಧಿಕಾರಿಗಳ ಕ್ರಮಕ್ಕೆ ವ್ಯಾಪಕ ಆಕ್ರೋಶ
Photo : indiatoday
ನ್ಯೂಯಾರ್ಕ್,ಡಿ.16: ಗ್ರೀನ್ ಕಾರ್ಡ್ ಗಾಗಿನ ಸಂದರ್ಶನದ ಕೊನೆಯ ಸುತ್ತಿನ ವೇಳೆ ಅಮೆರಿಕದ ವಲಸೆ ಅಧಿಕಾರಿಗಳು 60 ವರ್ಷ ವಯಸ್ಸಿನ ಭಾರತೀಯ ಮೂಲದ ಮಹಿಳೆಯೊಬ್ಬರನ್ನು ಬಂಧಿಸಿದ ಘಟನೆ ವರದಿಯಾಗಿದೆ.
ಬಬ್ಬಲ್ಜೀತ್ ಯಾನೆ ಬಬ್ಲಿ ಕೌರ್ ಬಂಧಿತ ಮಹಿಳೆಯಾಗಿದ್ದು, ಆಕೆ 1994ರಿಂದ ಅಮೆರಿಕದಲ್ಲಿ ವಾಸವಾಗಿದ್ದಾರೆ. ವಿಲೇವಾರಿಗೆ ಬಾಕಿಯಿದ್ದ ಅವರ ಗ್ರೀನ್ ಕಾರ್ಡ್ ಅರ್ಜಿಯ ಬಯೋಮೆಟ್ರಿಕ್ ಸ್ಕ್ಯಾನಿಂಗ್ ಸಂದರ್ಭ ಅವರನ್ನು ಫೆಡರಲ್ ಏಜೆಂಟರು ವಶಕ್ಕೆ ತೆಗೆದುಕೊಂಡರೆಂದು, ಕೌರ್ ಅವರ ಪುತ್ರಿ ಜ್ಯೋತಿ ತಿಳಿಸಿದ್ದಾರೆ.
ಬಬ್ಲಿ ಕೌರ್ ಸಲ್ಲಿಸಿದ್ದ ಗ್ರೀನ್ ಕಾರ್ಡ್ ಅರ್ಜಿಯನ್ನು,ಅಮೆರಿಕ ಪ್ರಜೆಗಳಾದ ಆಕೆಯ ಇನ್ನೋರ್ವ ಪುತ್ರಿ ಹಾಗೂ ಅಳಿಯ ಅನುಮೋದಿಸಿದ್ದರು.
ಡಿಸೆಂಬರ್ 1ರಂದು ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಜಾರಿ (ಐಸಿಇ) ಕಚೇರಿಯಲ್ಲಿದ್ದಾಗ ಹಲವಾರು ಫೆಡರಲ್ ಏಜೆಂಟರುಗಳು ಅಲ್ಲಿಗೆ ಆಗಮಿಸಿದ್ದರು. ಆಗ ಕಚೇರಿ ಅಧಿಕಾರಿಗಳು ಕೌರ್ ರನ್ನು ಫೆಡರಲ್ ಏಜೆಂಟರುಗಳಿದ್ದ ಇನ್ನೊಂದು ಕೊಠಡಿಗೆ ತೆರಳುವಂತೆ ಸೂಚಿಸಲಾಯಿತು. ಅಲ್ಲಿ ಆಕೆಯನ್ನು ಬಂಧಿಸಲಾಯಿತೆಂದು ಜ್ಯೋತಿ ತಿಳಿಸಿದ್ದಾರೆ.
ಕೌರ್ರಿಗೆ ಅವರ ನ್ಯಾಯವಾದಿ ಜೊತೆ ದೂರವಾಣಿ ಮಾತುಕತೆ ನಡೆಸಲು ಅವಕಾಶ ನೀಡಲಾಗಿದೆ. ಆದರೆ ಆಕೆ ಇನ್ನೂ ಬಂಧನದಲ್ಲಿದ್ದಾರೆಂದು ಆಕೆಯ ಪುತ್ರಿ ತಿಳಿಸಿದ್ದಾರೆ.
ಹಲವಾರು ತಾಸುಗಳವರೆಗೆ ಕೌರ್ ರನ್ನು ಎಲ್ಲಿಗೆ ಕರೆದುಕೊಂಡು ಹೋಗಲಾಗಿದೆಯೆಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲ. ಆದರೆ ಆನಂತರ ಆಕೆಯನ್ನು ಅಕ್ರಮವಾಗಿ ವಲಸಿಗರನ್ನು ಬಂಧನದಲ್ಲಿರಿಸಲು ಬಳಸಲಾಗುತ್ತಿದ್ದ ಹಳೆಯ ಫೆಡರಲ್ ಕಾರಾಗೃಹಕ್ಕೆ ಕೊಂಡೊಯ್ಯಲಾಗಿದೆಯೆಂದು ತಿಳಿದುಬಂದಿತೆಂದು ಜ್ಯೋತಿ ತಿಳಿಸಿದ್ದಾರೆ.
ಎರಡು ದಶಕಗಳಿಂದ ಕೌರ್ ಹಾಗೂ ಆಕೆಯ ಪತಿ, ಅಮೆರಿಕ ಬೆಲ್ಮೊಂಟ್ ಶೋರ್ ಪ್ರದೇಶದಲ್ಲಿ ಹೊಟೇಲ್ ಒಂದನ್ನು ನಡೆಸುತ್ತಿದ್ದರು. ಅವರ ಉಪಾಹಾರ ಮಳಿಗೆ ಈ ವರ್ಷದ ಆರಂಭದಲ್ಲಿ ಮುಚ್ಚುಗಡೆಯಾದ ಬಳಿಕ ಅವರು ಫಾರ್ಮಸಿ ಮಳಿಗೆಯಲ್ಲಿ ಕೆಲಸ ಮಾಡಿದ್ದು. ತೀರಾ ಇತ್ತೀಚೆಗೆ ಅವರು ನ್ಯೂಯಾರ್ಕ್ನ ಭಾರತೀಯ ಹೊಟೇಲ್ ಒಂದರಲ್ಲಿ ಉದ್ಯೋಗಕ್ಕೆ ಸೇರಲು ಸಿದ್ದತೆ ನಡೆಸುತ್ತಿದ್ದರು.
ಈ ಮಧ್ಯೆ ಕೌರ್ ಬಂಧನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಡೆಮಾಕ್ರಾಟಿಕ್ ಪಕ್ಷದ ಸಂಸದ ರಾಬರ್ಟ್ ಅವರು ಕೌರ್ ರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ರಾಬರ್ಟ್ ಅವರು ಫೆಡರಲ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವುದಾಗಿ ಅವರ ಕಚೇರಿಯ ಮೂಲಗಳು ತಿಳಿಸಿವೆ.