ಭಯೋತ್ಪಾದನೆಗೆ ಆಶ್ರಯ ಅಂತ್ಯಗೊಳಿಸುವ ತನಕ ಸಿಂಧೂ ನದಿ ಜಲ ಒಪ್ಪಂದ ಸ್ಥಗಿತ: ಭದ್ರತಾ ಮಂಡಳಿಯಲ್ಲಿ ಭಾರತ ಪುನರುಚ್ಚಾರ
ಸಾಂದರ್ಭಿಕ ಚಿತ್ರ | PC : PTI
ವಿಶ್ವಸಂಸ್ಥೆ,ಡಿ.16: ಪಾಕಿಸ್ತಾನವು ಮತ್ತೊಮ್ಮೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಮ್ಮುಕಾಶ್ಮೀರ ವಿಷಯವನ್ನು ಅನಪೇಕ್ಷಿತವಾಗಿ ಪ್ರಸ್ತಾವಿಸಿರುವುದನ್ನು ಹಾಗೂ ಆ ಕೇಂದ್ರಾಡಳಿತ ಪ್ರದೇಶದ ಮೇಲಿನ ಅದರ ಹಕ್ಕೊತ್ತಾಯವನ್ನು ಭಾರತವು ಸೋಮವಾರ ತೀವ್ರವಾಗಿ ಖಂಡಿಸಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್, ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಸದಾ ಕಾಲವೂ ಹಾಗೆಯೇ ಇರಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಹರೀಶ್ ಪರ್ವತನೇನಿ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಹಾಗೂ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷವನ್ನು ನಿಷೇಧ ಮತ್ತು ಪಾಕ್ ಸಂವಿಧಾನದ 27ನೇ ತಿದ್ದುಪಡಿಯ ಮೂಲಕ ರಕ್ಷಣಾ ಪಡೆಗಳ ವರಿಷ್ಠ ಆಸೀಮ್ ಮುನೀರ್ರಿಗೆ ಕಾನೂನುಕ್ರಮಗಳಿಂದ ಅಜೀವ ರಕ್ಷಣೆ ನೀಡಿರುವುನ್ನು ಅವರು ಟೀಕಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ‘ಶಾಂತಿಗಾಗಿ ನಾಯಕತ್ವ’ ಕುರಿತ ಚರ್ಚಾಗೋಷ್ಠಿಯಲ್ಲಿ ಪಾಕಿಸ್ತಾನವು ಭಾರತ ಹಾಗೂ ಅದರ ಪ್ರಜೆಗಳಿಗೆ ಹಾನಿಯೆಸಗುವ ಬಗ್ಗೆ ಗಮನಹರಿಸುವುದನ್ನೇ ಗೀಳಾಗಿಸಿಕೊಂಡಿದೆ ಎಂದು ಪರ್ವತನೇನಿ ಖಂಡಿಸಿದರು.
ಜಾಗತಿಕ ಭಯೋತ್ಪಾದನೆಗೆ ಪಾಕಿಸ್ತಾನವು ಕೇಂದ್ರ ಬಿಂದುವಾಗಿದ್ದು ಎಂದು ಬಣ್ಣಿಸಿದ ಪರ್ವತನೇನಿ ಆ ದೇಶದ ಜೊತೆ ಸಿಂಧೂ ನದಿ ಜಲ ಹಂಚಿಕೆ ಒಪ್ಪಂದವನ್ನು ಕೊನೆಗೊಳಿಸಿದ್ದನ್ನು ಸಮರ್ಥಿಸಿಕೊಂಡರು.
ಭದ್ರತಾ ಮಂಡಳಿಯಲ್ಲಿ ನಡೆದ ಶಾಂತಿಗಾಗಿ ನಾಯಕತ್ವ ಚರ್ಚಾಗೋಷ್ಠಿಯಲ್ಲಿ ಪಾಕ್ ರಾಯಭಾರಿ ಆಸೀಮ್ ಇಫ್ತಿಕಾರ್ ಅಹ್ಮದ್ ಅವರು ಜಮ್ಮುಕಾಶ್ಮೀರವು ಬಗೆಹರಿಯದ ವಿವಾದ ಎಂದು ಪುನರುಚ್ಚರಿಸಿರುವುದಕ್ಕೆ ಪ್ರತಿಯಾಗಿ ಪರ್ವತನೇನಿ ಈ ಕಟು ಪ್ರತಿಕ್ರಿಯೆ ನೀಡಿದ್ದಾರೆ.
‘‘ಜಮ್ಮುಕಾಶ್ಮೀರ ವಿವಾದವು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅತ್ಯಂತ ಹಳೆಯ ಕಾರ್ಯಸೂಚಿಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಯ ಸನದು ಹಾಗೂ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಮತ್ತು ಜಮ್ಮುಕಾಶ್ಮೀರದ ಜನತೆಯ ಇಚ್ಛೆಗೆ ಅನುಗುಣವಾಗಿ ಅದು ಇತ್ಯರ್ಥವಾಗಬೇಕಿದೆ ಎಂದು ಅಹ್ಮದ್ ಹೇಳಿದ್ದರು.
‘ಉತ್ತಮ ವಿಶ್ವಾಸ, ಸದ್ಭಾವನೆ ಹಾಗೂ ಮಿತ್ರತ್ವದೊಂದಿಗೆ ಭಾರತವು ಪಾಕ್ ಜೊತೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಏರ್ಪಡಿಸಿಕೊಂಡಿತ್ತು. ಆದರೂ ಆರೂವರೆ ದಶಕಗಳುದ್ದಕ್ಕೂ ಪಾಕಿಸ್ತಾನವು ಮೂರು ಯುದ್ಧಗಳು ಹಾಗೂ ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಒಪ್ಪಂದದ ಆಶಯವನ್ನು ಉಲ್ಲಂಘಿಸಿದೆ’’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಹರೀಶ್ ಪರ್ವತನೇನಿ ಹೇಳಿದರು.
►ಭಾಷಣದ ಮುಖ್ಯಾಂಶಗಳು
-ಕಳೆದ ನಾಲ್ಕು ದಶಕಗಳಲ್ಲಿ ಪಾಕ್ ಪ್ರಾಯೋಜಿತ ಭಯೋತ್ಪಾದಕ ದಾಳಿಗಳಿಂದ ಸಾವಿರಾರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ.
ಭಾರತವು ಏಕಪಕ್ಷೀಯವಾಗಿ ಸಿಂಧೂ ನದಿ ಒಪ್ಪಂದವನ್ನು ಅಮಾನತಿನಲ್ಲಿರಿಸಿರುವುದು ಅಂತಾರಾಷ್ಟ್ರೀಯ ಬಾಧ್ಯತೆಗಳ ಘೋರ ಉಲ್ಲಂಘನೆಯೆಂದು ಪಾಕಿಸ್ತಾನ ಬಣ್ಣಿಸಿತ್ತು.
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಮತ್ತಿತರ ವಿಧದ ಉಗ್ರವಾದಕ್ಕೆ ಬೆಂಬಲವನ್ನು ವಿಶ್ವಸನೀಯವಾಗಿ ಹಾಗೂ ಶಾಶ್ವತವಾಗಿ ಕೊನೆಗೊಳಿಸುವವರೆಗೆ ಸಿಂಧೂ ನದಿ ನೀರಿನ ಒಪ್ಪಂದವನ್ನು ಅಮಾನತಿನಲ್ಲಿಡುವುದಾಗಿ ಭಾರತವು ಅಂತಿಮವಾಗಿ ಘೋಷಿಸಿದೆ.