"ವಿಶ್ವಾಸ ದ್ರೋಹ ಮಾಡಿದೆ": ಗಾಝಾದಲ್ಲಿ ಪತ್ರಕರ್ತರ ಹತ್ಯೆ ಬೆನ್ನಲ್ಲೇ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ರಾಜೀನಾಮೆ ನೀಡಿದ ಕೆನಡಾದ ಪತ್ರಕರ್ತೆ
"ಇಸ್ರೇಲ್‌ನ ಆಧಾರರಹಿತ ಆರೋಪಗಳನ್ನು ರಾಯಿಟರ್ಸ್ ಪುನರಾವರ್ತಿಸುವ ಮೂಲಕ ದಾಳಿಯನ್ನು ನ್ಯಾಯೀಕರಿಸಿದೆ"
Photo credit: X/@valeriezink
ಒಟ್ಟಾವಾ : ಗಾಝಾದಲ್ಲಿ ಐವರು ಪತ್ರಕರ್ತರ ಹತ್ಯೆ ಬೆನ್ನಲ್ಲೇ ರಾಯಿಟರ್ಸ್ ಸುದ್ದಿ ಸಂಸ್ಥೆಯು ವಿಶ್ವಾಸ ದ್ರೋಹ ಮಾಡಿದೆ ಎಂದು ಕೆನಡಾದ ಛಾಯಾಗ್ರಾಹಕಿಯೋರ್ವರು ರಾಯಿಟರ್ಸ್ ಸಂಸ್ಥೆಯನ್ನು ತೊರೆದಿದ್ದಾರೆ. ಇಸ್ರೇಲ್‌ನ ಆಧಾರರಹಿತ ಆರೋಪಗಳನ್ನು ರಾಯಿಟರ್ಸ್ ಸಂಸ್ಥೆಯೂ ಪುನರಾವರ್ತಿಸುವ ಮೂಲಕ ಇಸ್ರೇಲ್ ದಾಳಿಯನ್ನು ನ್ಯಾಯೀಕರಿಸಿದೆ ಎಂದು ಆರೋಪಿಸಿದ್ದಾರೆ.
ಎಂಟು ವರ್ಷಗಳ ಕಾಲ ರಾಯಿಟರ್ಸ್‌ನಲ್ಲಿ ಅರೆಕಾಲಿಕ ಛಾಯಾಗ್ರಾಹಕಿಯಾಗಿ ಕೆಲಸ ಮಾಡಿದ್ದ ವ್ಯಾಲೆರಿ ಜಿಂಕ್, ರಾಯಿಟರ್ಸ್ ಸುದ್ದಿ ಸಂಸ್ಥೆಯ ಐಡಿ ಕಾರ್ಡ್ ಅನ್ನು ಅರ್ಧಕ್ಕೆ ಕತ್ತರಿಸಿರುವ ಪೋಟೊವನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ರಾಜೀನಾಮೆಯನ್ನು ಘೋಷಿಸಿದ್ದಾರೆ.
" ಗಾಝಾದಲ್ಲಿ 245 ಪತ್ರಕರ್ತರ ವ್ಯವಸ್ಥಿತ ಹತ್ಯೆಯನ್ನು ಸಮರ್ಥಿಸುವುದನ್ನು ನೋಡಿದರೆ ರಾಯಿಟರ್ಸ್ ಜೊತೆ ಸಂಬಂಧವನ್ನು ಕಾಪಾಡಿಕೊಳ್ಳುವುದು ನನಗೆ ಅಸಾಧ್ಯವಾಗಿದೆ. ಫೆಲೆಸ್ತೀನ್‌ನಲ್ಲಿರುವ ನನ್ನ ಸಹೋದ್ಯೋಗಿಗಳಿಗೆ ನಾನು ತೋರುವ ಕನಿಷ್ಠ ಹೊಣೆಗಾರಿಕೆಯಾಗಿದೆ” ಎಂದು ವ್ಯಾಲೆರಿ ಜಿಂಕ್ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದ ಅಲ್ ಜಝೀರಾ ಪತ್ರಕರ್ತ ಅನಸ್ ಅಲ್-ಶರೀಫ್ ಅವರ ಹತ್ಯೆಯ ಬಗ್ಗೆ “ಅವರು ಹಮಾಸ್ ನೊಂದಿಗೆ ಸಂಬಂಧ ಹೊಂದಿದ್ದಾರೆ” ಎಂಬ ಆಧಾರರಹಿತ ಇಸ್ರೇಲ್ ಆರೋಪವನ್ನು ರಾಯಿಟರ್ಸ್ ಸಂಸ್ಥೆಯೂ ಪುನರಾವರ್ತಿಸಿದೆ ಎಂದು ಅವರು ಹೇಳಿದ್ದಾರೆ.
ಪುಲಿಟ್ಜರ್ ಪ್ರಶಸ್ತಿ ವಿಜೇತ ಅನಸ್ ಅಲ್-ಶರೀಫ್, ಇಸ್ರೇಲ್ ಸೇನೆಯಿಂದ ಬೆದರಿಕೆ ಇದೆ ಎಂದು ರಕ್ಷಣೆ ಕೋರಿದ್ದರು. ಇಸ್ರೇಲ್ ಸೇನೆ ಅವರನ್ನು ಹಮಾಸ್ ಪಟ್ಟಿಗೆ ಸೇರಿಸಿದರೂ ರಾಯಿಟರ್ಸ್ ಅವರ ಪರ ನಿಂತಿಲ್ಲ ಎಂದು ವ್ಯಾಲರಿ ಜಿಂಕ್ ಆರೋಪಿಸಿದರು.
ಸೋಮವಾರ ಗಾಝಾದ ನಾಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ ರಾಯಿಟರ್ಸ್ ಛಾಯಾಗ್ರಾಹಕ ಹೊಸಮ್ ಅಲ್ ಮಸ್ರಿ ಸೇರಿದಂತೆ ಐವರು ಪತ್ರಕರ್ತರು ಮೃತಪಟ್ಟಿದ್ದರು.