ಗಾಝಾ ವಿಭಜನೆಗೊಳ್ಳುವ ಅಪಾಯ ಹೆಚ್ಚಿದೆ: ಯುರೋಪ್ ರಾಜತಾಂತ್ರಿಕರ ಎಚ್ಚರಿಕೆ
ಸಾಂದರ್ಭಿಕ ಚಿತ್ರ | Photo : aljazeera.com
ನ್ಯೂಯಾರ್ಕ್, ನ.11: ಕದನ ವಿರಾಮವನ್ನು ಮೀರಿ ಗಾಝಾ ಯುದ್ಧವನ್ನು ಕೊನೆಗೊಳಿಸುವ ಟ್ರಂಪ್ ಯೋಜನೆಯನ್ನು ಮುನ್ನಡೆಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಗಾಝಾವು ವಿಭಜನೆಗೊಳ್ಳುವ ಅಪಾಯ ಹೆಚ್ಚಿದೆ ಎಂದು ಯುರೋಪ್ ನ 6 ಪ್ರಮುಖ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ನಿಂದ ನಿಯಂತ್ರಿಸಲ್ಪಡುವ ಪ್ರದೇಶ ಮತ್ತು ಹಮಾಸ್ ನಿಂದ ಆಳಲ್ಪಡುವ ಮತ್ತೊಂದು ಪ್ರದೇಶದ ನಡುವೆ ಗಾಝಾದ ವಾಸ್ತವಿಕ ವಿಭಜನೆಯ ಅಪಾಯ ಹೆಚ್ಚಿದೆ. ಅದು ದೀರ್ಘಾವಧಿಯ ಪ್ರತ್ಯೇಕತೆಗೆ ಕಾರಣವಾಗಬಹುದು ಎಂದು ಯೋಜನೆಯ ಮುಂದಿನ ಹಂತವನ್ನು ಅನುಷ್ಠಾನಗೊಳಿಸುವ ಪ್ರಯತ್ನಗಳ ಬಗ್ಗೆ ಮಾಹಿತಿಯಿರುವ ಯುರೋಪ್ ನ ಅಧಿಕಾರಿಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಅಕ್ಟೋಬರ್ 10ರಿಂದ ಜಾರಿಗೆ ಬಂದಿರುವ ಯೋಜನೆಯ ಪ್ರಥಮ ಹಂತದ ಪ್ರಕಾರ, ಇಸ್ರೇಲಿ ಮಿಲಿಟರಿ ಪ್ರಸ್ತುತ ಹೆಚ್ಚಿನ ಕೃಷಿ ಭೂಮಿ, ದಕ್ಷಿಣದಲ್ಲಿ ರಫಾ, ಗಾಝಾ ನಗರದ ಭಾಗ ಮತ್ತು ಇತರ ನಗರ ಪ್ರದೇಶ ಸೇರಿದಂತೆ ಮೆಡಿಟರೇನಿಯನ್ ಪ್ರದೇಶದ 53 ಪ್ರತಿಶತವನ್ನು ನಿಯಂತ್ರಿಸುತ್ತದೆ. ಗಾಝಾದ 2 ದಶಲಕ್ಷ ಜನಸಂಖ್ಯೆಯ ಬಹುತೇಕ ಜನರು ಗಾಝಾದ ಉಳಿದ ಪ್ರದೇಶದಲ್ಲಿ ಡೇರೆಗಳಲ್ಲಿ ಅಥವಾ ಛಿದ್ರಗೊಂಡ ಕಟ್ಟಡಗಳ ಅವಶೇಷಗಳ ನಡುವೆ ತುಂಬಿದ್ದು ಈ ಪ್ರದೇಶ ಹಮಾಸ್ ನ ನಿಯಂತ್ರಣದಲ್ಲಿದೆ.
ಯೋಜನೆಯ ಮುಂದಿನ ಹಂತದ ಪ್ರಕಾರ, ಇಸ್ರೇಲ್ `ಹಳದಿ ಗೆರೆ' ಎಂದು ಕರೆಯಲ್ಪಡುವ ಪ್ರದೇಶದವರೆಗೆ ಹಿಂದೆ ಸರಿಯುತ್ತದೆ. ಗಾಝಾವನ್ನು ಆಳಲು ಪರಿವರ್ತನಾ ಪ್ರಾಧಿಕಾರದ ಸ್ಥಾಪನೆ, ಇಸ್ರೇಲ್ ಮಿಲಿಟರಿಯ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲು ಬಹು ರಾಷ್ಟ್ರೀಯ ಭದ್ರತಾ ಪಡೆಯ ನಿಯೋಜನೆ, ಹಮಾಸ್ ನ ನಿಶ್ಯಸ್ತ್ರೀಕರಣ ಮತ್ತು ಪುನರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ ಯೋಜನೆಯು ಅನುಷ್ಠಾನಕ್ಕೆ ಯಾವುದೇ ಸಮಯಾವಧಿ ಅಥವಾ ಕಾರ್ಯವಿಧಾನವನ್ನು ಒದಗಿಸಿಲ್ಲ. ಈ ಮಧ್ಯೆ ಹಮಾಸ್ ಶಸ್ತ್ರಾಸ್ತ್ರ ತ್ಯಜಿಸಲು ನಿರಾಕರಿಸಿದರೆ, ಪಾಶ್ಚಿಮಾತ್ಯರ ಬೆಂಬಲವಿರುವ ಫೆಲೆಸ್ತೀನಿಯನ್ ಪ್ರಾಧಿಕಾರದ ಯಾವುದೇ ಒಳಗೊಳ್ಳುವಿಕೆಯನ್ನು ಇಸ್ರೇಲ್ ತಿರಸ್ಕರಿಸುತ್ತಿದೆ. ಅಲ್ಲದೆ ಬಹುರಾಷ್ಟೀಯ ಪಡೆಯ ಕುರಿತ ಅನಿಶ್ಚಿತತೆ ಮುಂದುವರಿದಿದೆ.
ಹಮಾಸ್ ಅಥವಾ ಇಸ್ರೇಲ್ ನ ನಿಲುವಿನಲ್ಲಿ ಪ್ರಮುಖ ಬದಲಾವಣೆಯಾಗದಿದ್ದರೆ, ಅಥವಾ ಫೆಲೆಸ್ತೀನಿಯನ್ ಪ್ರಾಧಿಕಾರದ ಪಾತ್ರವನ್ನು ಒಪ್ಪಿಕೊಳ್ಳುವಂತೆ ಇಸ್ರೇಲ್ ನ ಮೇಲೆ ಅಮೆರಿಕಾ ಒತ್ತಡ ಹಾಕದಿದ್ದರೆ ಟ್ರಂಪ್ ಅವರ ಯೋಜನೆಯು ಕದನ ವಿರಾಮಕ್ಕಿಂತ ಮುಂದೆ ಸಾಗುವ ಲಕ್ಷಣ ಕಾಣಿಸುತ್ತಿಲ್ಲ ಎಂದು ಯುರೋಪಿಯನ್ ಅಧಿಕಾರಿಗಳು ಹೇಳಿದ್ದಾರೆ. ಶಾಂತಿ ಮತ್ತು ಯುದ್ದದ ನಡುವಿನ ನಿರ್ಜನ ಪ್ರದೇಶದಲ್ಲಿ ಗಾಝಾ ಸಿಲುಕಿಕೊಳ್ಳಬಾರದು ಎಂದು ಬ್ರಿಟನ್ ನ ವಿದೇಶಾಂಗ ಕಾರ್ಯದರ್ಶಿ ಯೆವೆಟ್ ಕೂಪರ್ ಪ್ರತಿಪಾದಿಸಿದ್ದಾರೆ.