ಉಕ್ರೇನ್ ಯುದ್ಧ ಕೊನೆಗೊಳಿಸುವುದು ಕಷ್ಟದ ಕೆಲಸ: ರಶ್ಯ ಅಧ್ಯಕ್ಷ ಪುಟಿನ್
ವ್ಲಾದಿಮಿರ್ ಪುಟಿನ್ | Photo Credit : PTI \ AP
ಮಾಸ್ಕೋ: ಉಕ್ರೇನ್‍ನಲ್ಲಿ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕಾದ ರಾಯಭಾರಿಯೊಂದಿಗೆ ತಾನು ನಡೆಸಿದ ಐದು ಗಂಟೆಗಳ ಮಾತುಕತೆ ಅಗತ್ಯ ಮತ್ತು ಉಪಯುಕ್ತವಾಗಿತ್ತು. ಆದರೆ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವುದು ಕಷ್ಟದ ಕೆಲಸ. ಕೆಲವು ಪ್ರಸ್ತಾಪಗಳು ರಶ್ಯಕ್ಕೆ ಸ್ವೀಕಾರಾರ್ಹವಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಕ್ರೆಮ್ಲಿನ್‍ನಲ್ಲಿ ನಡೆದ ಮಾತುಕತೆಯಲ್ಲಿ ಅಮೆರಿಕಾದ ಶಾಂತಿ ಪ್ರಸ್ತಾಪದ ಪ್ರತಿಯೊಂದೂ ಅಂಶದ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಆದ್ದರಿಂದಲೇ ಇದು ತುಂಬಾ ಸಮಯವನ್ನು ತೆಗೆದುಕೊಂಡಿತು. ಆದರೆ ಇದು ಅಗತ್ಯವಾದ ಮತ್ತು ವಾಸ್ತವಿಕ ಮಾತುಕತೆಯಾಗಿತ್ತು. ಇದು ತುಂಬಾ ಕಷ್ಟದ ಕೆಲಸ ಎಂದು ಪುಟಿನ್ ಹೇಳಿರುವುದಾಗಿ ರಶ್ಯದ ಸರ್ಕಾರಿ ಸ್ವಾಮ್ಯದ `ತಾಸ್' ಮತ್ತು ಆರ್ ಐಎ ನೊವಾಸ್ತಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಈ ಮಧ್ಯೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜರೇಡ್ ಕುಷ್ನರ್ ಮಿಯಾಮಿಯಲ್ಲಿ ಉಕ್ರೇನ್‍ನ ಮುಖ್ಯ ಸಮಾಲೋಚಕ ರುಸ್ತೆಮ್ ಉಮೆರೋವ್‍ರನ್ನು ಭೇಟಿಯಾಗಿ ಮಾತುಕತೆ ನಡೆಸಲಿರುವುದಾಗಿ ಶ್ವೇತಭವನದ ಮೂಲಗಳು ಹೇಳಿವೆ.
ಯುದ್ದ ಕೊನೆಗೊಳಿಸಲು ಪುಟಿನ್ ಬಯಸುತ್ತಾರೆ: ಡೊನಾಲ್ಡ್ ಟ್ರಂಪ್
ಮಾಸ್ಕೋದಲ್ಲಿ ನಡೆದ ಮಾತುಕತೆ ಫಲಿತಾಂಶ ರಹಿತವಾಗಿದ್ದರೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತಿರುವುದಾಗಿ ತಾನು ನಂಬುತ್ತೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜರೆಡ್ ಕುಷ್ನರ್ ಕ್ರೆಮ್ಲಿನ್‍ನಲ್ಲಿ ಪುಟಿನ್ ಜೊತೆ ಮಾತುಕತೆ ನಡೆಸಿದ್ದರೂ ಉಕ್ರೇನ್ ಯುದ್ದವನ್ನು ಕೊನೆಗೊಳಿಸುವ ವಿಷಯದಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ ಎಂದು ರಶ್ಯ ಅಧ್ಯಕ್ಷರ ಕಚೇರಿ ಬುಧವಾರ ಹೇಳಿದೆ. ಮಾತುಕತೆಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ` ನಮ್ಮ ಪ್ರತಿನಿಧಿ ರಶ್ಯ ಅಧ್ಯಕ್ಷ ಪುಟಿನ್‍ರೊಂದಿಗೆ ಸಮಂಜಸವಾದ ಉತ್ತಮ ಸಭೆ ನಡೆಸಿದ್ದಾರೆ ಎಂದು ಹೇಳಬಲ್ಲೆ. ಪುಟಿನ್ ಯುದ್ದ ಕೊನೆಗೊಳಿಸಲು ಬಯಸಿದ್ದಾರೆ ಎಂದು ಅವರಿಗೆ ಅನಿಸಿದೆ. ಆದರೆ ಏನಾಗಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ.