ಸೌದಿ ಗುಹೆಗಳಲ್ಲಿ ಮೊದಲ ಬಾರಿಗೆ ಚೀತಾ ಮಮ್ಮಿಗಳು ಪತ್ತೆ!
Photo Credit : AP \ PTI
ಹೊಸದಿಲ್ಲಿ: ವಿಜ್ಞಾನಿಗಳು ಉತ್ತರ ಸೌದಿ ಅರೇಬಿಯದ ಗುಹೆಗಳಲ್ಲಿ ನೈಸರ್ಗಿಕವಾಗಿ ಮಮ್ಮಿಗಳಾಗಿ ರೂಪಾಂತರಗೊಂಡ ಚೀತಾಗಳ ಅವಶೇಷಗಳನ್ನು ಪತ್ತೆ ಹಚ್ಚಿದ್ದು, ಇದೇ ಮೊದಲ ಬಾರಿಗೆ ಈ ಅಪರೂಪದ ಶೋಧ ನಡೆದಿದೆ.
ಅವಶೇಷಗಳು 130 ಮತ್ತು 1,800ಕ್ಕೂ ಹೆಚ್ಚು ವರ್ಷಗಳ ನಡುವಿನಷ್ಟು ಹಿಂದಿನದಾಗಿವೆ. ಸಂಶೋಧಕರು ಅರಾರ್ ನಗರದ ಬಳಿಯ ಸ್ಥಳದಲ್ಲಿ ಏಳು ಚೀತಾ ಮಮ್ಮಿಗಳು ಮತ್ತು ಇತರ ಚೀತಾಗಳ 54 ಮೂಳೆಗಳನ್ನು ಪತ್ತೆ ಹಚ್ಚಿದ್ದಾರೆ.
ಮಮ್ಮೀಕರಣವು ಶವಗಳು ಕೊಳೆಯುವುದನ್ನು ನಿಧಾನಿಸುತ್ತದೆ ಮತ್ತು ಸಾವಿನ ಬಳಿಕ ಶವಗಳ ಸಂರಕ್ಷಣೆಗೆ ನೆರವಾಗುತ್ತದೆ. ಈಜಿಪ್ಟ್‌ನ ಮಮ್ಮಿಗಳು ಹೆಚ್ಚು ಪ್ರಸಿದ್ಧವಾಗಿದ್ದರೆ,ಮರಳುಗಾಡು,ನೀರ್ಗಲ್ಲು ಪ್ರದೇಶಗಳು ಮತ್ತು ಜೌಗು ಭೂಮಿಗಳಲ್ಲಿಯೂ ಮಮ್ಮೀಕರಣವು ನೈಸರ್ಗಿಕವಾಗಿ ನಡೆಯುತ್ತದೆ. ಹೊಸದಾಗಿ ಪತ್ತೆಯಾಗಿರುವ ಚೀತಾ ಮಮ್ಮಿಗಳು ಮಂಕಾದ ಕಣ್ಣುಗಳು ಮತ್ತು ಸಂಕುಚಿತ ಕಾಲುಗಳನ್ನು ಹೊಂದಿದ್ದು,ಒಣಗಿದ ಹೊಟ್ಟಿನಂತೆ ಕಾಣುತ್ತಿವೆ.
‘ಇಂತಹುದನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ’ ಎಂದು ಇಟಲಿಯ ಫ್ಲಾರೆನ್ಸ್ ವಿವಿಯ ಜೋನ್ ಮಡುರೆಲ್-ಮಲಪೀರಾ ಹೇಳಿದರು. ಅವರು ಈ ಸಂಶೋಧನೆಯಲ್ಲಿ ಭಾಗಿಯಾಗಿರಲಿಲ್ಲ.
ಚೀತಾಗಳು ಇಷ್ಟೊಂದು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದ್ದು ಹೇಗೆ ಎಂಬ ಬಗ್ಗೆ ವಿಜ್ಞಾನಿಗಳಿಗೆ ಖಚಿತವಿಲ್ಲ. ಆದಾಗ್ಯೂ ಗುಹೆಗಳಲ್ಲಿನ ಶುಷ್ಕ ಪರಿಸ್ಥಿತಿಗಳು ಮತ್ತು ಸ್ಥಿರವಾದ ತಾಪಮಾನಗಳು ಮಮ್ಮೀಕರಣಕ್ಕೆ ನೆರವಾಗಿರಬಹುದು ಎಂದು ಅಧ್ಯಯನವು ಸೂಚಿಸಿದೆ. ಸಂಶೋಧನಾ ವರದಿಯು ಕಮ್ಯುನಿಕೇಷನ್ಸ್ ಅರ್ತ್ ಆ್ಯಂಡ್ ಎನ್ವಿರಾನ್ಮೆಂಟ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಸಂಶೋಧಕರು ಹಿಂದೆ ರಷ್ಯಾದಲ್ಲಿ ಬಾಗುಕತ್ತಿಯಂತಹ ಹಲ್ಲುಗಳನ್ನು ಹೊಂದಿದ್ದ ಬೆಕ್ಕಿನ ಮರಿ ಸೇರಿದಂತೆ ಇತರ ಬೆಕ್ಕುಗಳ ಮಮ್ಮಿಗಳನ್ನು ಪತ್ತೆ ಹಚ್ಚಿದ್ದರು. ಆದಾಗ್ಯೂ ಚೀತಾದಂತಹ ದೊಡ್ಡ ಪ್ರಾಣಿಗಳು ಇಷ್ಟೊಂದು ಸುಸ್ಥಿತಿಯಲ್ಲಿ ಸಂರಕ್ಷಿತಗೊಂಡಿದ್ದು ತುಂಬ ಅಪರೂಪವಾಗಿದೆ. ಇದಕ್ಕೆ ಸೂಕ್ತ ವಾತಾವರಣದ ಜೊತೆಗೆ ಶವಗಳು ಹಕ್ಕಿಗಳು ಮತ್ತು ಹೈನಾಗಳಂತಹ ಕೊಳೆತ ಪದಾರ್ಥಗಳನ್ನು ತಿನ್ನುವ ‘ಜಾಡಮಾಲಿ’ಗಳಿಂದ ತಪ್ಪಿಸಿಕೊಂಡಿರಬೇಕು.
ಈ ಪ್ರದೇಶದಲ್ಲಿ ಪ್ರಾಚೀನ ಚೀತಾಗಳ ಸಂರಕ್ಷಿತ ಪಳೆಯುಳಿಕೆಗಳ ಶೋಧವು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಜಗತ್ತಿನ ಈ ಭಾಗದಲ್ಲಿ ದೀರ್ಘ ಕಾಲದ ಹಿಂದೆ ವಾಸವಾಗಿದ್ದ ಚೀತಾಗಳ ಇಷ್ಟೊಂದು ಸುಸ್ಥಿತಿಯಲ್ಲಿರುವ ಅವಶೇಷಗಳು ಪತ್ತೆಯಾಗಿರುವುದು ಅಭೂತಪೂರ್ವವಾಗಿದೆ ಎಂದು ವರದಿಯ ಲೇಖಕರಾಗಿರುವ ಸೌದಿ ಅರೇಬಿಯದ ರಾಷ್ಟ್ರೀಯ ವನ್ಯಜೀವಿ ಕೇಂದ್ರದ ಅಹ್ಮದ್ ಬೌಗ್ ಹೇಳಿದ್ದಾರೆ.
ಚೀತಾಗಳು ಒಂದು ಕಾಲದಲ್ಲಿ ಆಫ್ರಿಕಾದಾದ್ಯಂತ ಮತ್ತು ಏಷ್ಯಾದ ಭಾಗಗಳಲ್ಲಿ ವಾಸವಾಗಿದ್ದವು,ಆದರೆ ಇಂದು ಅವುಗಳ ಸಂಖ್ಯೆ ಈ ಪ್ರಮಾಣದ ಕೇವಲ ಶೇ.9ಕ್ಕೆ ಇಳಿದಿದ್ದು, ದಶಕಗಳಿಂದಲೂ ಅರೇಬಿಯನ್ ಪರ್ಯಾಯ ದ್ವೀಪಗಳಿಂದ ಮಾಯವಾಗಿವೆ. ಆವಾಸ ಸ್ಥಾನದ ನಷ್ಟ, ಬೇಟೆ ಮತ್ತು ಆಹಾರದ ಕೊರತೆ ಅವುಗಳ ಅವನತಿಗೆ ಪ್ರಮುಖ ಕಾರಣಗಳಾಗಿವೆ ಎನ್ನುತ್ತಾರೆ ತಜ್ಞರು.
ವಿಜ್ಞಾನಿಗಳಿಗೆ ಇದೇ ಮೊದಲ ಬಾರಿಗೆ ನೈಸರ್ಗಿಕವಾಗಿ ಮಮ್ಮೀಕೃತ ದೊಡ್ಡ ಬೆಕ್ಕುಗಳ ವಂಶಾವಳಿಯ ಅಧ್ಯಯನವೂ ಸಾಧ್ಯವಾಗಿದೆ. ಈ ಚೀತಾಗಳು ಏಷ್ಯಾ ಮತ್ತು ವಾಯುವ್ಯ ಆಫ್ರಿಕಾದ ಆಧುನಿಕ ಚೀತಾಗಳೊಂದಿಗೆ ನಿಕಟ ಸಂಬಂಧ ಹೊಂದಿವೆ ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ. ಈ ಮಾಹಿತಿಯು ಚೀತಾಗಳು ಅಸ್ತಿತ್ವದಲ್ಲಿರದ ಪ್ರದೇಶಗಳಲ್ಲಿ ಅವುಗಳನ್ನು ಮರಳಿ ತರುವ ಭವಿಷ್ಯದ ಪ್ರಯತ್ನಗಳಿಗೆ ನೆರವಾಗಬಹುದು.