ಹೊದೈದಾ ಬಂದರು ತೆರವುಗೊಳಿಸಲು ಸೌದಿ ಒಕ್ಕೂಟದ ಸೂಚನೆ; ಹೂತಿಗಳಿಂದ ಪ್ರತೀಕಾರದ ಬೆದರಿಕೆ
Photo Credit : X
ರಿಯಾದ್, ನ.20: ಯಮನ್ ನ ಹೂತಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಮಿತ್ರಪಡೆ ಶುಕ್ರವಾರ ಪ್ರಮುಖ ಬಂದರು ನಗರವಾದ ಹೊದೈದಾವನ್ನು ತೆರವುಗೊಳಿಸುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಬೆಂಬಲಿತ ಹೂತಿ ಬಂಡುಕೋರರ ಗುಂಪು ವ್ಯಾಪಕ ಪ್ರತೀಕಾರದ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.
ಹೊದೈದಾ ಮೇಲೆ ದಾಳಿ ನಡೆದರೆ ಜೆಡ್ಡಾ ಮತ್ತು ಕೆಂಪು ಸಮುದ್ರದ ತೀರದಲ್ಲಿರುವ ಸೌದಿಯ ಇತರ ಬಂದರುಗಳ ಮೇಲೆ ದಾಳಿ ನಡೆಸುವುದಾಗಿ ಹೂತಿಗಳು ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೆ, ಸೌದಿ ವಾಯುಪ್ರದೇಶವು 'ಅಸುರಕ್ಷಿತವಾಗಿದೆ' ಎಂದು ಎಚ್ಚರಿಸಿದ್ದು, ರಿಯಾದ್ ನ ಆರ್ಥಿಕ ಜಿಲ್ಲೆಯ ಮೇಲೂ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದಾರೆ.
ನಾಗರಿಕರು ತಮ್ಮ ಸುರಕ್ಷತೆಗಾಗಿ ಹೊದೈದಾ ಬಂದರನ್ನು ತೆರವುಗೊಳಿಸುವಂತೆ ಒಕ್ಕೂಟದ ಜಂಟಿ ಪಡೆಗಳ ಕಮಾಂಡ್ ವಿನಂತಿಸುತ್ತಿದೆ ಎಂದು ಒಕ್ಕೂಟದ ವಕ್ತಾರ ತುರ್ಕಿ ಅಲ್-ಮಾಲ್ಕಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಹೂತಿಗಳು, 'ಒಂದು ವೇಳೆ ಹೊದೈದಾ ಮೇಲೆ ದಾಳಿ ನಡೆದರೆ ಜೆಡ್ಡಾ ಮತ್ತು ಕೆಂಪು ಸಮುದ್ರದ ಕರಾವಳಿಯುದ್ದಕ್ಕೂ ಇರುವ ಎಲ್ಲಾ ಶತ್ರು ಸೌದಿ ಬಂದರುಗಳು ನಮ್ಮ ಪಡೆಗಳ ಗುರಿಯಾಗಲಿವೆ' ಎಂದು ಹೇಳಿದ್ದಾರೆ.
ಸೌದಿ ವಾಯುಪ್ರದೇಶವು ನಮ್ಮ ಕಾರ್ಯಾಚರಣೆಯ ರಣರಂಗವಾಗಲಿರುವುದರಿಂದ, ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾ ಮೇಲಿನ ವಾಯುಪ್ರದೇಶವನ್ನು ಹೊರತುಪಡಿಸಿ ಉಳಿದ ಸೌದಿ ವಾಯುಪ್ರದೇಶವು ಅಸುರಕ್ಷಿತವಾಗಿದೆ ಎಂದು ನಾವು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ ನೀಡುತ್ತೇವೆ ಎಂದು ಹೂತಿ ಸೇನಾ ವಕ್ತಾರ ಯಾಹ್ಯಾ ಸಾರಿ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ರಿಯಾದ್ ನ 'ಕಿಂಗ್ ಅಬ್ದುಲ್ಲಾ ಫೈನಾನ್ಷಿಯಲ್ ಡಿಸ್ಟ್ರಿಕ್ಟ್' ನಮ್ಮ ಮಿಲಿಟರಿ ಗುರಿಯಾಗಿದ್ದು, ಜನರು ಆ ಪ್ರದೇಶದಿಂದ ದೂರವಿರುವಂತೆ ಎಚ್ಚರಿಕೆ ನೀಡುತ್ತೇವೆ. ದಕ್ಷಿಣ ಸೌದಿ ಅರೇಬಿಯಾದ ಜಿಜಾನ್ ನಲ್ಲಿರುವ ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಈ ಮಧ್ಯೆ, ಯಮನ್ ನ ಮೋಚಾದಲ್ಲಿನ ವಿದ್ಯುತ್ ಸ್ಥಾವರದ ಮೇಲೆ ಸೌದಿ ಒಕ್ಕೂಟವು ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ನಾಗರಿಕ ದೋಣಿಯ ಮೇಲೆ ಸೌದಿ ಪಡೆಗಳ ದಾಳಿ : 19 ಜನರ ಮೃತ್ಯು
ದಕ್ಷಿಣ ಯಮನ್ ನ ರಾಸ್ ಅಲ್-ಅರಾದಿಂದ ಹೇಸ್ಗೆ 25ಕ್ಕೂ ಹೆಚ್ಚು ನಿರಾಶ್ರಿತರನ್ನು ಕರೆದೊಯ್ಯುತ್ತಿದ್ದ ನಾಗರಿಕ ದೋಣಿಯ ಮೇಲೆ ಶುಕ್ರವಾರ ಸೌದಿ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಹತ್ತೊಂಬತ್ತು ನಾಗರಿಕರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ಹೂತಿ ಅಧಿಕಾರಿಗಳು ಆರೋಪಿಸಿದ್ದಾರೆ.
ಮೃತರಲ್ಲಿ ಎಂಟು ಮಕ್ಕಳು ಮತ್ತು ಆರು ಮಹಿಳೆಯರು ಸೇರಿದ್ದಾರೆ ಎಂದು ಹೂತಿಗಳ ಅಲ್ಮಸಿರಾ ಟೆಲಿವಿಷನ್ ಚಾನೆಲ್ ವರದಿ ಮಾಡಿದೆ. ಈ ಘಟನೆಯನ್ನು ಯುದ್ಧ ಅಪರಾಧ ಎಂದು ಹೂತಿ ಆಡಳಿತದ ಆರೋಗ್ಯ ಸಚಿವಾಲಯದ ವಕ್ತಾರ ಅನಿಸ್ ಅಲ್-ಅಸ್ಬಾಹಿ ಪ್ರತಿಪಾದಿಸಿದ್ದು, ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲು ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಆಗ್ರಹಿಸಿದ್ದಾರೆ.
ಈ ವರದಿಗಳ ಕುರಿತು ಸೌದಿ ನೇತೃತ್ವದ ಮೈತ್ರಿಕೂಟವು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.