IBMನಿಂದ ವೀಸಾ, ಗ್ರೀನ್ ಕಾರ್ಡ್ ಪ್ರಾಯೋಜಕತ್ವ ಸ್ಥಗಿತ: ಭಾರತೀಯ ಉದ್ಯೋಗಿಗಳಿಗೆ ಸಂಕಷ್ಟ
ಮೂರು ವಾರಗಳಲ್ಲಿ ಸ್ಥಳಾಂತರದ ನಿರ್ಧಾರ ತಿಳಿಸಲು ಉದ್ಯೋಗಿಗಳಿಗೆ ಗಡುವು; ಅಮೆರಿಕದ ಹೊರಗಿನ ಹುದ್ದೆಗಳಿಗೆ ಅವಕಾಶ
Photo Credit : NDTV
ವಾಷಿಂಗ್ಟನ್: ಅಮೆರಿಕದ ತಂತ್ರಜ್ಞಾನ ದೈತ್ಯ IBM ತನ್ನ ಸಮಾಲೋಚನಾ ವಿಭಾಗದ (IBM Consulting) ಬಹುತೇಕ ಹುದ್ದೆಗಳಿಗೆ ಅಮೆರಿಕದ ವೀಸಾ ಮತ್ತು ಗ್ರೀನ್ ಕಾರ್ಡ್ ಪ್ರಾಯೋಜಕತ್ವವನ್ನು ಅಂತ್ಯಗೊಳಿಸಲು ಗುರುವಾರ ನಿರ್ಧರಿಸಿದೆ. IBMನ ಅತಿದೊಡ್ಡ ವಿಭಾಗವಾಗಿರುವ ಸಮಾಲೋಚನಾ ವಿಭಾಗದಲ್ಲಿ ಜಾಗತಿಕವಾಗಿ ಸುಮಾರು 1,50,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ.
IBMನ ಈ ನಿರ್ಧಾರದಿಂದ ಭಾರತೀಯ ಸಂಜಾತ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಅಮೆರಿಕದಲ್ಲಿ ಗ್ರೀನ್ ಕಾರ್ಡ್ಗಾಗಿ ಕಾಯುತ್ತಿರುವ H-1B ವೀಸಾ ಹೊಂದಿರುವವರಲ್ಲಿ ಭಾರತೀಯರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ, ಈ ನಿರ್ಧಾರ IBMನ ಎಲ್ಲ ವಿಭಾಗಗಳಿಗೂ ಅನ್ವಯಿಸುವುದಿಲ್ಲ. ಅಲ್ಲದೆ, ಎಷ್ಟು ಉದ್ಯೋಗಿಗಳು ನೇರವಾಗಿ ಬಾಧಿತರಾಗಲಿದ್ದಾರೆ ಎಂಬುದನ್ನು ಕಂಪೆನಿ ಬಹಿರಂಗಪಡಿಸಿಲ್ಲ.
ಈ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿರುವ ಉದ್ಯೋಗಿಗಳ ಮುಂದೆ ಪ್ರಮುಖವಾಗಿ ಎರಡು ಆಯ್ಕೆಗಳಿವೆ. ಅಮೆರಿಕದ ಹೊರಗಿನ ಹುದ್ದೆಗಳಿಗೆ, ಅದರಲ್ಲೂ ಭಾರತಕ್ಕೆ ಸ್ಥಳಾಂತರಗೊಳ್ಳುವುದು ಅಥವಾ ಕಂಪೆನಿಯನ್ನು ತೊರೆಯುವುದು. ತಮ್ಮ ವೀಸಾವನ್ನು ಪ್ರಾಯೋಜಿಸಲು ಸಿದ್ಧವಿರುವ ಬೇರೆ ಉದ್ಯೋಗದಾತರನ್ನು ಹುಡುಕಿಕೊಳ್ಳುವುದೂ ಉದ್ಯೋಗಿಗಳ ಮುಂದಿರುವ ಮತ್ತೊಂದು ಪರ್ಯಾಯವಾಗಿದೆ.
ವಿದೇಶಗಳಲ್ಲಿನ ಹುದ್ದೆಗಳಿಗೆ ಸ್ಥಳಾಂತರಗೊಳ್ಳಲು ಬಯಸುವ ಉದ್ಯೋಗಿಗಳು ಮೂರು ವಾರಗಳೊಳಗೆ ತಮ್ಮ ನಿರ್ಧಾರವನ್ನು ತಿಳಿಸಬೇಕು ಎಂದು IBM ಗಡುವು ನೀಡಿದೆ. ಸ್ಥಳಾಂತರಕ್ಕೆ ಒಪ್ಪದ ಉದ್ಯೋಗಿಗಳು ಮೂರು ತಿಂಗಳ ವೇತನಕ್ಕೆ ಸಮಾನವಾದ ಪರಿಹಾರವನ್ನು ಸ್ವೀಕರಿಸಬಹುದು. ಆ ಉದ್ಯೋಗಿಗಳಿಗೆ ಡಿ. 31, 2026 ಕೊನೆಯ ಕೆಲಸದ ದಿನವಾಗಿರಲಿದೆ.
IBMನ ಉದ್ಯೋಗ ಪೋರ್ಟಲ್ನಲ್ಲಿ ನ. 19ರಂದು ಅಮೆರಿಕದ ಹೊರಗಿನ IBM Consulting ವಿಭಾಗದ 1,278 ಹುದ್ದೆಗಳು ಪ್ರಕಟವಾಗಿದ್ದವು. ಈ ಪೈಕಿ 1,125 ಹುದ್ದೆಗಳು ಭಾರತದಲ್ಲಿದ್ದವು. ಆದರೆ, ಈ ಎಲ್ಲ ಹುದ್ದೆಗಳು ಬಾಧಿತ ಉದ್ಯೋಗಿಗಳಿಗಾಗಿಯೇ ಮೀಸಲಾಗಿವೆ ಎಂಬುದಕ್ಕೆ ದೃಢೀಕರಣವಿಲ್ಲ.
ತನ್ನ ನಿರ್ಧಾರಕ್ಕೆ ಸ್ಪಷ್ಟನೆ ನೀಡಿರುವ IBM, ಕಳೆದ ಕೆಲವು ವರ್ಷಗಳಿಂದ ಅತ್ಯಂತ ಕೌಶಲಭರಿತ ಉದ್ಯೋಗಿಗಳಿಗಾಗಿ ವೀಸಾ ಕಾರ್ಯಕ್ರಮಗಳನ್ನು ಅವಲಂಬಿಸುವ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದೆ. ಕಕ್ಷಿದಾರರ ಬದಲಾಗುತ್ತಿರುವ ಅಗತ್ಯಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ಕೌಶಲಭರಿತ ಉದ್ಯೋಗಿಗಳು ಲಭ್ಯವಾಗುತ್ತಿರುವುದು ಇದಕ್ಕೆ ಕಾರಣ ಎಂದು ಕಂಪೆನಿ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಉದ್ಯೋಗಾಧಾರಿತ ವಲಸೆಯ ಮೇಲೆ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಕೌಶಲಭರಿತ ಉದ್ಯೋಗಗಳಿಗಾಗಿ ವಿದೇಶಿ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಅಮೆರಿಕದ ಕಂಪೆನಿಗಳಿಗೆ H-1B ವೀಸಾ ಕಾರ್ಯಕ್ರಮ ಅವಕಾಶ ಕಲ್ಪಿಸುತ್ತದೆ. ಈ ಯೋಜನೆಯ ಫಲಾನುಭವಿಗಳಲ್ಲಿ ಭಾರತೀಯರ ಪ್ರಮಾಣವೇ ಅತ್ಯಧಿಕವಾಗಿದೆ. ಹೀಗಾಗಿ, ಈ ಯೋಜನೆಯಲ್ಲಿ ಯಾವುದೇ ಬದಲಾವಣೆಯಾದರೂ ಭಾರತದ ತಂತ್ರಜ್ಞಾನ ವಲಯದ ಉದ್ಯೋಗಿಗಳು ಮತ್ತು ಮಾನವ ಸಂಪನ್ಮೂಲದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.