ಅ. 7ರ ದಾಳಿಯ ತನಿಖೆಗೆ ಇಸ್ರೇಲ್ ಸಂಸತ್ತು ಒಪ್ಪಿಗೆ; ಪ್ರಧಾನಿಯ ಅಧಿಕಾರಾವಧಿಗೆ ಮಿತಿ ಹೇರುವ ಮಸೂದೆಗೂ ಅನುಮೋದನೆ
ನೆತನ್ಯಾಹು ವಿರುದ್ಧ ವಿರೋಧ ಪಕ್ಷಗಳ ಮೇಲುಗೈ
ಬೆಂಜಮಿನ್ ನೆತನ್ಯಾಹು | Photo Credit : AP
ಜೆರುಸಲೆಮ್, ನ. 26: 2023ರ ಅ. 7ರಂದು ಹಮಾಸ್ ನಡೆಸಿದ ದಾಳಿಯ ಕುರಿತು ಸ್ವತಂತ್ರ ತನಿಖೆ ನಡೆಸಲು ಇಸ್ರೇಲ್ ಸಂಸತ್ತು ಬುಧವಾರ (ನ. 25) ಆರಂಭಿಕ ಒಪ್ಪಿಗೆ ನೀಡಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ತನಿಖೆಯನ್ನು ವಿರೋಧಿಸುತ್ತಿದ್ದರೆ, ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿರುವ ಪ್ರತಿಸ್ಪರ್ಧಿಗಳು ಸ್ವತಂತ್ರ ತನಿಖೆಯ ಭರವಸೆ ನೀಡಿದ್ದರು.
ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಭೀಕರ ದಿನಕ್ಕೆ ಕಾರಣವಾದ ಭದ್ರತಾ ವೈಫಲ್ಯಗಳ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಆಯೋಗ ಸ್ಥಾಪಿಸುವ ಕಾನೂನನ್ನು ಅಂಗೀಕರಿಸಲು ಅಗತ್ಯವಿರುವ ನಾಲ್ಕು ಹಂತಗಳ ಮತದಾನದಲ್ಲಿ ಬುಧವಾರದ ಮತದಾನ ಮೊದಲನೆಯದಾಗಿದೆ. ಇದೇ ವೇಳೆ, ಪ್ರಧಾನಿಯ ಅಧಿಕಾರಾವಧಿಗೆ ಮಿತಿ ಹೇರುವ ಮತ್ತು ಕ್ರಿಮಿನಲ್ ಆರೋಪ ಎದುರಿಸುತ್ತಿರುವವರು ಪ್ರಧಾನಿಯಾಗಿ ಸೇವೆ ಸಲ್ಲಿಸುವುದನ್ನು ನಿರ್ಬಂಧಿಸುವ ಮಸೂದೆಗೂ ಸಂಸತ್ತು ಆರಂಭಿಕ ಒಪ್ಪಿಗೆ ನೀಡಿದೆ. ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಇಸ್ರೇಲ್ನ ಅತಿ ದೀರ್ಘಾವಧಿಯ ನಾಯಕ ನೆತನ್ಯಾಹು ಅವರನ್ನು ಗುರಿಯಾಗಿಸಿಕೊಂಡು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ.
ತನಿಖಾ ಆಯೋಗ ಸ್ಥಾಪಿಸುವ ಮಸೂದೆಯನ್ನು ಅಂಗೀಕರಿಸಲು ಐಸೆನ್ಕೋಟ್ ನೇತೃತ್ವದ ವಿರೋಧ ಪಕ್ಷಗಳ ಬಣಕ್ಕೆ ಅರಬ್ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಪಕ್ಷಗಳು ಕೈಜೋಡಿಸಿದವು. ಸುಮಾರು 65 ಶಾಸಕರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 50 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು.
ಪ್ರಧಾನಿಯ ಅಧಿಕಾರಾವಧಿಗೆ ಮಿತಿ ಹೇರುವ ಪ್ರತ್ಯೇಕ ಮಸೂದೆಗೆ 65 ಶಾಸಕರು ಪರವಾಗಿ ಮತ್ತು 48 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು.
ಚುನಾವಣೆಯಲ್ಲಿ ತಮ್ಮ ಒಕ್ಕೂಟವು ಸಂಸತ್ತಿನ ಬಹುಮತವನ್ನು ಕಳೆದುಕೊಂಡ ನಂತರವೂ ಅಧಿಕಾರದಲ್ಲಿ ಮುಂದುವರಿದಿರುವ ನೆತನ್ಯಾಹು, 'ಈ ಮಸೂದೆಯು ಇರಾನ್ ಮತ್ತು ಹಲವಾರು ಸರ್ವಾಧಿಕಾರಿ ರಾಷ್ಟ್ರಗಳಲ್ಲಿ ಬಳಸಲಾಗುವ ರಾಜಕೀಯವಾಗಿ ಮುಗಿಸುವ ಅಸ್ತ್ರವಾಗಿದೆ' ಎಂದು ಟೀಕಿಸಿದ್ದಾರೆ.
ನೆತನ್ಯಾಹು ಅವರು ಸ್ವತಂತ್ರ ತನಿಖೆಯನ್ನು ವಿರೋಧಿಸುತ್ತಿದ್ದು, ಬದಲಾಗಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಂಸತ್ ಸದಸ್ಯರಿಗೆ ನೀಡುವ ಮತ್ತು ತನಿಖೆಯ ವ್ಯಾಪ್ತಿಯನ್ನು ನಿರ್ಧರಿಸುವ ಅಧಿಕಾರವನ್ನು ಸಚಿವ ಸಂಪುಟಕ್ಕೆ ನೀಡುವ ಸರಕಾರದ ನಿಯಂತ್ರಣದ ತನಿಖೆಗೆ ಒತ್ತಾಯಿಸಿದ್ದಾರೆ. ಐಸೆನ್ಕೋಟ್ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ಇದನ್ನು 'ಸತ್ಯವನ್ನು ಮುಚ್ಚಿಡುವ ನೆತನ್ಯಾಹು ಅವರ ಪ್ರಯತ್ನ' ಎಂದು ಹೇಳಿದ್ದಾರೆ.
ಶಾಸಕಾಂಗದ ಕಾರ್ಯಸೂಚಿಯನ್ನು ವಿರೋಧ ಪಕ್ಷಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರೂ, ಹೊಸ ಸರಕಾರ ರಚಿಸಲು ಅಧ್ಯಕ್ಷರಿಂದ ಆಹ್ವಾನ ಪಡೆದಿರುವ ವಿರೋಧ ಪಕ್ಷದ ನಾಯಕ ಗಾಡಿ ಐಸೆನ್ಕೋಟ್ ಹೊಸ ಆಡಳಿತಾರೂಢ ಒಕ್ಕೂಟವನ್ನು ರಚಿಸಲು ಇನ್ನೂ ಪ್ರಯತ್ನಿಸುತ್ತಿದ್ದಾರೆ.
►ತನಿಖೆಗೆ ಸಾರ್ವಜನಿಕರ ವ್ಯಾಪಕ ಬೆಂಬಲ
ದಶಕಗಳಲ್ಲೇ ದೇಶ ಕಂಡ ಅತಿದೊಡ್ಡ ಭದ್ರತಾ ಲೋಪದ ಕುರಿತು ಆಯೋಗದಿಂದ ತನಿಖೆ ನಡೆಸುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲವಿದೆ ಎಂದು ಸಮೀಕ್ಷೆಗಳು ತೋರಿಸಿವೆ. 'ಮೃತರ ಕುಟುಂಬಗಳಿಗಾಗಿ, ಒತ್ತೆಯಾಳುಗಳಾಗಿ ಬದುಕುಳಿದವರಿಗಾಗಿ ಮತ್ತು ಜೀವಂತವಾಗಿ ನಮ್ಮ ಬಳಿಗೆ ಮರಳದವರಿಗಾಗಿ, ನಾವು ಸತ್ಯವನ್ನು ಬಯಲಿಗೆಳೆಯುತ್ತೇವೆ ಮತ್ತು ಮುಂದಿನ ದುರಂತವನ್ನು ತಡೆಯಲು ಪ್ರತಿಯೊಂದು ಹೆಜ್ಜೆಯನ್ನೂ ಇಡುತ್ತೇವೆ' ಎಂದು ಐಸೆನ್ಕೋಟ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.