×
Ad

ಟಾಲ್ಕಮ್ ಪೌಡರ್ ನಿಂದ ಕ್ಯಾನ್ಸರ್ | ಯುಕೆಯಲ್ಲಿ ಜಾನ್ಸನ್ & ಜಾನ್ಸನ್ ವಿರುದ್ಧ ಬೃಹತ್ ಕಾನೂನು ಹೋರಾಟ: ವರದಿ

Update: 2025-10-17 23:55 IST

Photo Credit :NDTV

ಲಂಡನ್, ಅ.17: ಔಷಧೀಯ ಹಾಗೂ ಗ್ರಾಹಕ ಉತ್ಪನ್ನ ತಯಾರಿಕಾ ದೈತ್ಯ ಜಾನ್ಸನ್ & ಜಾನ್ಸನ್ (Johnson & Johnson – J&J) ವಿರುದ್ಧ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಅತಿದೊಡ್ಡ ಮಟ್ಟದ ಕಾನೂನು ಹೋರಾಟ ಆರಂಭವಾಗಿದೆ ಎಂದು BBCಯು ವರದಿ ಮಾಡಿದೆ.

ಜಾನ್ಸನ್ & ಜಾನ್ಸನ್ ಕಂಪೆನಿಯ ಮೇಲೆ ಆಸ್ಬೆಸ್ಟೋಸ್ ನಿಂದ ಕಲುಷಿತಗೊಂಡ ಟಾಲ್ಕಮ್ ಬೇಬಿ ಪೌಡರ್ ಎಂದು ತಿಳಿದಿದ್ದರೂ ಮಾರಾಟ ಮುಂದುವರಿಸಿದ ಆರೋಪ ಹೊರಿಸಲಾಗಿದೆ.

3,000ಕ್ಕೂ ಹೆಚ್ಚು ಮಂದಿ ಈ ಕುರಿತು ದೂರು ಸಲ್ಲಿಸಿದ್ದು, ಪ್ರಕರಣವು BBC ಪಡೆದಿರುವ ಆಂತರಿಕ ದಾಖಲೆಗಳು ಹಾಗೂ ವೈಜ್ಞಾನಿಕ ವರದಿಗಳ ಆಧಾರದ ಮೇಲೆ ಮುಂದುವರಿಯುತ್ತಿದೆ. ಕಾನೂನು ಸಂಸ್ಥೆ ಕೆಪಿ ಲಾ (KP Law) ಕಂಪೆನಿಯು ಹಾಗೂ ಅದರ ಅಂಗಸಂಸ್ಥೆ ಕೆನ್‌ವ್ಯೂ ಲಿಮಿಟೆಡ್ (Kenvue Ltd) ವಿರುದ್ಧವೂ ಮೊಕದ್ದಮೆ ಹೂಡಿದೆ.

ಕಂಪೆನಿಗೆ 1960ರ ದಶಕದಲ್ಲಿಯೇ ತನ್ನ ಪೌಡರ್‌ನಲ್ಲಿ ಟ್ರೆಮೋಲೈಟ್ ಹಾಗೂ ಆಕ್ಟಿನೋಲೈಟ್ ಎಂಬ ಕಲ್ನಾರು ಅಂಶಗಳ ಇರುವಿಕೆ ತಿಳಿದಿತ್ತು ಎಂದು ಆರೋಪಿಸಲಾಗಿದೆ. ಈ ಖನಿಜ ನಾರಿನ ಅಂಶಗಳು ಕ್ಯಾನ್ಸರ್‌ ಕಾರಿ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಆದರೂ, ಕಂಪೆನಿಯು ಯಾವುದೇ ಎಚ್ಚರಿಕೆ ನೀಡದೆ ಅದನ್ನು “ಶುದ್ಧತೆ ಮತ್ತು ಸುರಕ್ಷತೆಯ ಸಂಕೇತ”ವೆಂದು ಪ್ರಚಾರ ಮಾಡಿದೆ ಎಂಬುದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಕಂಪೆನಿಯು ಈ ಆರೋಪಗಳನ್ನು ತಳ್ಳಿ ಹಾಕಿದೆ. “ನಮ್ಮ ಬೇಬಿ ಪೌಡರ್ ಯಾವುದೇ ಕಲ್ನಾರು ಅಂಶವನ್ನು ಹೊಂದಿಲ್ಲ; ಅದು ಎಲ್ಲಾ ನಿಯಂತ್ರಣ ಮಾನದಂಡಗಳಿಗೆ ಅನುಗುಣವಾಗಿದೆ ಮತ್ತು ಅದರಿಂದ ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

ಜಾನ್ಸನ್ & ಜಾನ್ಸನ್ 2023ರಲ್ಲಿ ಯುಕೆಯಲ್ಲಿ ಬೇಬಿ ಪೌಡರ್ ಮಾರಾಟವನ್ನು ನಿಲ್ಲಿಸಿತ್ತು. ಆದರೆ ಅಮೆರಿಕಾದಲ್ಲಿ ಇದೇ ರೀತಿಯ ಸಾವಿರಾರು ಮೊಕದ್ದಮೆಗಳಲ್ಲಿ ಕಂಪೆನಿಯು ಕೋಟ್ಯಂತರ ಡಾಲರ್ ಪರಿಹಾರ ಪಾವತಿಸಬೇಕಾಯಿತು. ಕಾನೂನು ತಜ್ಞರ ಅಂದಾಜಿನ ಪ್ರಕಾರ, ಯುಕೆಯ ಈ ಹೊಸ ಮೊಕದ್ದಮೆ ಬ್ರಿಟನ್ ಇತಿಹಾಸದಲ್ಲೇ ಅತಿದೊಡ್ಡ ಉತ್ಪನ್ನ ಹೊಣೆಗಾರಿಕೆ (Product Liability) ಪ್ರಕರಣವಾಗುವ ಸಾಧ್ಯತೆ ಇದೆ.

BBCಗೆ ಸಿಕ್ಕಿರುವ ಆಂತರಿಕ ದಾಖಲೆಗಳ ಪ್ರಕಾರ, ಜಾನ್ಸನ್ & ಜಾನ್ಸನ್ ಅಧಿಕಾರಿಗಳು 1970ರ ದಶಕದಲ್ಲಿಯೇ ಕಲ್ನಾರು ಅಂಶಗಳನ್ನು ಪತ್ತೆಹಚ್ಚಿದ್ದರು. 1973ರ ಮೆಮೊದಲ್ಲಿ “ನಮ್ಮ ಪೌಡರ್‌ನಲ್ಲಿ ಟ್ರೆಮೋಲೈಟ್ ಅಥವಾ ಆಕ್ಟಿನೋಲೈಟ್‌ನ ಅಲ್ಪ ಪ್ರಮಾಣ ಕಂಡುಬಂದಿದೆ” ಎಂದು ಉಲ್ಲೇಖವಾಗಿದ್ದು, ಕಂಪೆನಿಯು ಈ ಮಾಹಿತಿಯನ್ನು ಸಾರ್ವಜನಿಕಗೊಳಿಸದೆ “ಗೌಪ್ಯವಾಗಿಡಲು” ತೀರ್ಮಾನಿಸಿದೆ ಎಂದು ದಾಖಲೆಗಳು ಬಹಿರಂಗಪಡಿಸುತ್ತವೆ.

“ನನ್ನ ತಾಯಿ ಈ ಪೌಡರ್ ಬಳಸುತ್ತಿದ್ದರು. ನಾನೂ ಅದನ್ನೇ ನಂಬಿದ್ದೆ. ಅದು ಶುದ್ಧತೆ ಮತ್ತು ಸುರಕ್ಷತೆಯ ಸಂಕೇತವೆಂದು ಭಾವಿಸಿದ್ದೆ. ಆದರೆ ಇಂದು ನಾನು ಹಂತ-4 ಅಂಡಾಶಯ ಕ್ಯಾನ್ಸರ್‌ ಜೊತೆ ಹೋರಾಡುತ್ತಿದ್ದೇನೆ. ಕಂಪೆನಿಯು ಅಪಾಯ ತಿಳಿದಿದ್ದರೂ ಮಾರಾಟ ಮುಂದುವರಿಸಿದ್ದು ಅಘಾತಕರ,” ಎಂದು 63 ವರ್ಷದ ಸಿಯೋಭನ್ ರಯಾನ್ ಅವರು BBCಗೆ ತಿಳಿಸಿದರು.

ವೈದ್ಯರು ಅಂಡಾಶಯ ಕ್ಯಾನ್ಸರ್‌ನ ಲಕ್ಷಣಗಳಾದ ನಿರಂತರ ಹೊಟ್ಟೆ ಉಬ್ಬುವುದು, ನೋವು, ತಿನ್ನಲು ಆಸಕ್ತಿ ಕಡಿಮೆಯಾಗುವುದು ಹಾಗೂ ಮಲಬದ್ಧತೆ ಮುಂತಾದವುಗಳನ್ನು ನಿರ್ಲಕ್ಷಿಸಬಾರದೆಂದು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಅಮೆರಿಕದ ಕನೆಕ್ಟಿಕಟ್ ನ್ಯಾಯಾಲಯವು ಜಾನ್ಸನ್ & ಜಾನ್ಸನ್ ಹಾಗೂ ಅದರ ಘಟಕಗಳು ಕ್ಯಾನ್ಸರ್‌ ಬಾಧಿತ ಮಹಿಳೆಗೆ 25 ಮಿಲಿಯನ್ ಡಾಲರ್ ಪರಿಹಾರ ಪಾವತಿಸಬೇಕೆಂದು ಆದೇಶಿಸಿತ್ತು. ನ್ಯಾಯಾಧೀಶರು ಕಂಪೆನಿಯು “ಆಸ್ಬೆಸ್ಟೋಸ್‌-ಕಲುಷಿತ ಟಾಲ್ಕ್ ಮಾರಾಟ ಮಾಡುವ ಮೂಲಕ ನಿರ್ಲಕ್ಷ್ಯ ವಹಿಸಿದೆ” ಎಂದು ತೀರ್ಪು ನೀಡಿದ್ದರು.

ಜಾನ್ಸನ್ & ಜಾನ್ಸನ್ ತನ್ನ ತಪ್ಪನ್ನು ನಿರಾಕರಿಸಿ ಮೇಲ್ಮನವಿ ಸಲ್ಲಿಸಲು ಸಜ್ಜಾಗಿದೆ. “ನಮ್ಮ ಬೇಬಿ ಪೌಡರ್ ಯಾವುದೇ ಕಲ್ನಾರು ಅಂಶವನ್ನು ಹೊಂದಿಲ್ಲ; ಅದು ಸಂಪೂರ್ಣ ಸುರಕ್ಷಿತವಾಗಿದ್ದು ಎಲ್ಲಾ ನಿಯಂತ್ರಣ ಮಾನದಂಡಗಳಿಗೆ ಅನುಗುಣವಾಗಿದೆ", ಎಂದು ಕಂಪೆನಿಯು ಪುನಃ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News