ಐಸಿಸ್ ಗೆ ಪಾಕ್ ಆಶ್ರಯ: ತಾಲಿಬಾನ್ ಆರೋಪ
ಜಬಿಹುಲ್ಲಾ ಮುಜಾಹಿದ್ | Photo Credit ; aljazeera.com
ಕಾಬೂಲ್, ಅ.12: ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಾದ್ಯಂತ ಶನಿವಾರ ತಡರಾತ್ರಿ ನಡೆದ ಘರ್ಷಣೆಯಲ್ಲಿ ಪಾಕಿಸ್ತಾನದ 58 ಸೈನಿಕರು ಸಾವನ್ನಪ್ಪಿದ್ದು ಇತರ 30 ಯೋಧರು ಗಾಯಗೊಂಡಿದ್ದಾರೆ. ಪಾಕ್ ಸೇನೆಯ 25 ಠಾಣೆಗಳನ್ನು ವಶಕ್ಕೆ ಪಡೆಯಲಾಗಿದೆ.
ಅಫ್ಘಾನಿಸ್ತಾನವು ತನ್ನ ಪ್ರದೇಶವನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಮತ್ತು ಯಾವುದೇ ದಾಳಿಗೆ ಪ್ರತ್ಯುತ್ತರ ನೀಡದೆ ಬಿಡುವುದಿಲ್ಲ ಎಂದು ತಾಲಿಬಾನ್ ಸರಕಾರದ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ರವಿವಾರ ಘೋಷಿಸಿದ್ದಾರೆ.
ಎಲ್ಲಾ ಅಧಿಕೃತ ಗಡಿಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಅಕ್ರಮ ಚಟುವಟಿಕೆಗಳನ್ನು ಬಹುತೇಕ ತಡೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮುಜಾಹಿದ್ ಹೇಳಿದ್ದಾರೆ.
ಪಾಕಿಸ್ತಾನವು ಹಲವು ದೇಶಗಳಿಗೆ ಬೆದರಿಕೆಯಾಗಿರುವ ಕುಖ್ಯಾತ ಭಯೋತ್ಪಾದಕ ಗುಂಪು ಐಸಿಸ್ ಗೆ ಆಶ್ರಯ ಕಲ್ಪಿಸಿದೆ. ಅಫ್ಘಾನಿಸ್ತಾನದಲ್ಲಿದ್ದ `ದೇಶದ್ರೋಹಿಗಳ ಪ್ರದೇಶ'ವನ್ನು ತಾಲಿಬಾನ್ ತೆರವುಗೊಳಿಸಿದ ಬಳಿಕ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾದಲ್ಲಿ ಐಸಿಸಿ ಉಗ್ರರಿಗೆ ಆಶ್ರಯ ಕಲ್ಪಿಸುವ ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ತರಬೇತಿಗಾಗಿ ಹೊಸ ಜನರನ್ನು ಕರೆತರಲಾಗುತ್ತಿದೆ. ಇರಾನ್ ಮತ್ತು ರಶ್ಯದಲ್ಲಿ ನಡೆದ ದಾಳಿಯ ಯೋಜನೆಯನ್ನು ಈ ಕೇಂದ್ರದಿಂದಲೇ ರೂಪಿಸಲಾಗಿತ್ತು. ಇಲ್ಲಿಂದಲೇ ಅಫ್ಘಾನಿಸ್ತಾನದ ಮೇಲಿನ ದಾಳಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದವರು ಆರೋಪಿಸಿದ್ದು ಐಸಿಸ್ ಸದಸ್ಯರನ್ನು ದೇಶದಿಂದ ಗಡೀಪಾರು ಮಾಡಿ ಅಫ್ಘಾನಿಸ್ತಾನಕ್ಕೆ ಹಸ್ತಾಂತರಿಸುವಂತೆ ಆಗ್ರಹಿಸಿದ್ದಾರೆ.
ಅಂಗೂರ್ ಅಡ್ಡಾ, ಬಜೌರ್, ಕುರ್ರಾಂ, ದಿರ್ ಮತ್ತು ಖೈಬರ್ ಪಖ್ತೂಂಕ್ವಾದ ಚಿತ್ರಾಲ್, ಬಲೂಚಿಸ್ತಾನದ ಬರಾಮ್ಚ ಪ್ರದೇಶಗಳಲ್ಲಿ ಪಾಕ್ ಸೇನೆಯ ಠಾಣೆಗಳನ್ನು ಅಫ್ಘಾನ್ ಪಡೆಗಳು ಗುರಿಯಾಗಿಸಿವೆ ಎಂದವರು ಹೇಳಿದ್ದಾರೆ.