ಪಾಕ್‍ಗೆ ಹರಿಯುವ ನದಿಗೆ ಅಣೆಕಟ್ಟು ನಿರ್ಮಾಣ : ತಾಲಿಬಾನ್ ಘೋಷಣೆ
Photo credit:hindustantimes
ಕಾಬೂಲ್, ಅ.24: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಕ್ರಮವೊಂದರಲ್ಲಿ, ಕುನಾರ್ ನದಿಗೆ ತಕ್ಷಣ ಅಣೆಕಟ್ಟು ನಿರ್ಮಿಸುವಂತೆ ತಾಲಿಬಾನ್‍ನ ಸರ್ವೋಚ್ಛ ನಾಯಕ ಹಿಬಾತುಲ್ಲಾ ಅಕುಂದ್‍ಝದ ಆದೇಶಿಸಿರುವುದಾಗಿ ಅಫ್ಘಾನ್‍ನ ಜಲಸಂಪನ್ಮೂಲ ಸಚಿವ ಅಬ್ದುಲ್ ಲತೀಫ್ ಮನ್ಸೂರ್ ಹೇಳಿದ್ದಾರೆ.
`ಅಫ್ಘನ್ನರಿಗೆ ಅವರ ಸ್ವಂತ ಜಲಸಂಪನ್ಮೂಲದ ಮೇಲೆ ಹಕ್ಕಿದೆ. ನಮ್ಮ ನಾಗರಿಕರ ಮೇಲೆ ದಾಳಿ ನಡೆಸಲು ಪಾಕಿಸ್ತಾನ ತನ್ನ ವಾಯು ಶಕ್ತಿಯನ್ನು ಬಳಸಿದೆ. ನಮ್ಮ ಆಂತರಿಕ ವ್ಯವಹಾರದಲ್ಲಿ ಪಾಕಿಸ್ತಾನದ ಹಸ್ತಕ್ಷೇಪವನ್ನು ತಡೆಯಲು ನೀರು ಮಾತ್ರ ಏಕೈಕ ಮಿಲಿಟರಿಯೇತರ ಆಯುಧವೆಂದು ನಾವು ಪರಿಗಣಿಸಿದ್ದೇವೆ. ನಮ್ಮ ಕಾರ್ಯಸೂಚಿ ಸ್ಪಷ್ಟವಾಗಿದೆ. ನೀರು ಪಾಕಿಸ್ತಾನಕ್ಕೆ ಹರಿದು ಹೋಗುವ ಮುನ್ನ ಅದನ್ನು ಅಫ್ಘಾನ್‍ನ ಕೃಷಿ ಮತ್ತು ವಿದ್ಯುತ್ ಉತ್ಪಾದನೆಗೆ ಭದ್ರಪಡಿಸುತ್ತಿದ್ದೇವೆ' ಎಂದು ಮನ್ಸೂರ್ ಅವರನ್ನು ಉಲ್ಲೇಖಿಸಿ ಮಾಧ್ಯಮ ವರದಿ ಹೇಳಿದೆ.
ನೀರನ್ನು ತಡೆಗಟ್ಟುವುದು ಪಾಕಿಸ್ತಾನದ ಆರ್ಥಿಕ ಮತ್ತು ಮಾನವೀಯ ಒತ್ತಡಕ್ಕೆ ಪ್ರತೀಕಾರ ಎಂದು ಪರಿಗಣಿಸಲಾಗಿದೆ. ಮೂಲಗಳ ಪ್ರಕಾರ, ದಕ್ಷಿಣ ಪಂಜಾಬ್ ಮತ್ತು ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಕೃಷಿ ಮೂಲವನ್ನು ದುರ್ಬಲಗೊಳಿಸಲು ಇರಾನ್ ಮತ್ತು ಚೀನಾಗಳು ತೆರೆಮರೆಯಲ್ಲಿ ನದಿ ನೀರಿನ ಮೇಲೆ ನಿಯಂತ್ರಣ ಸಾಧಿಸಲು ಅಫ್ಘಾನ್‍ಗೆ ಬೆಂಬಲ ನೀಡುತ್ತಿವೆ. ಅಫ್ಘಾನ್‍ನ ಪರ್ವತ ಪ್ರದೇಶದಲ್ಲಿ ಹುಟ್ಟುವ ಹೆಲ್ಮಂಡ್, ಕಾಬೂಲ್ ಮತ್ತು ಕುನಾರ್ ನದಿಗಳು ಪಾಕಿಸ್ತಾನದ ಕೃಷಿ ಭೂಮಿಗೆ ನೀರುಣಿಸುತ್ತಿವೆ. ನದಿಗಳಿಗೆ ಅಣೆಕಟ್ಟು ಮತ್ತು ಜಲಾಶಯಗಳನ್ನು ನಿರ್ಮಿಸುವ ಮೂಲಕ ಜಲ - ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ವಿಶಾಲ ಯೋಜನೆಯ ಭಾಗವಾಗಿದೆ ಎಂದು ವರದಿ ಹೇಳಿದೆ.