×
Ad

ಅಫ್ಘಾನ್‍ನ ತಾಲಿಬಾನ್ ಆಡಳಿತ ಕಾನೂನುಬದ್ಧವಲ್ಲ: ಪಾಕ್ ಹೇಳಿಕೆ

Update: 2025-10-13 21:53 IST

Photo Credit  : aljazeera.com

ಇಸ್ಲಾಮಾಬಾದ್, ಅ.13: ಗಡಿಭಾಗದಲ್ಲಿ ಘರ್ಷಣೆಯ ಬಳಿಕದ ಪ್ರಮುಖ ಬೆಳವಣಿಗೆಯೊಂದರಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಕಾನೂನುಬದ್ಧವಲ್ಲ ಎಂದು ಪಾಕಿಸ್ತಾನ ಸರಕಾರ ಪ್ರತಿಪಾದಿಸಿದೆ.

2021ರಲ್ಲಿ ಅಫ್ಘಾನಿಸ್ತಾನ ಸರಕಾರ ಪತನಗೊಂಡ ಬಳಿಕ ತಾಲಿಬಾನ್ ಆಡಳಿತವನ್ನು ಅನುಮೋದಿಸಿದ ಪ್ರಥಮ ದೇಶಗಳಲ್ಲಿ ಪಾಕಿಸ್ತಾನ ಮುಂಚೂಣಿಯಲ್ಲಿತ್ತು. ಅಕ್ಟೋಬರ್ 11-12ರ ರಾತ್ರಿ ಪಾಕ್-ಅಫ್ಘಾನ್ ಗಡಿಯಲ್ಲಿ ಅಫ್ಘಾನ್ ತಾಲಿಬಾನ್, ಭಯೋತ್ಪಾದಕರು ಮತ್ತು ಉಗ್ರಗಾಮಿಗಳು ನಡೆಸಿದ ಅನಗತ್ಯ ಆಕ್ರಮಣಶೀಲತೆಯ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಕಚೇರಿ ತೀವ್ರ ಕಳವಳ ವ್ಯಕ್ತಪಡಿಸಿದೆ.

ತನ್ನ ಭೂಪ್ರದೇಶವನ್ನು ಇತರ ದೇಶಗಳ ವಿರುದ್ಧದ ಭಯೋತ್ಪಾದನೆಗೆ ಬಳಸಲು ಅನುಮತಿಸದಿರುವ ತನ್ನ ಬದ್ಧತೆಯನ್ನು ಅಫ್ಘಾನಿಸ್ತಾನ ಗೌರವಿಸಬೇಕು ಮತ್ತು ಭಯೋತ್ಪಾದಕ ಗುಂಪುಗಳ ವಿರುದ್ಧ ದೃಢವಾದ ಮತ್ತು ಸಾಬೀತುಪಡಿಸಬಹುದಾದ ಕ್ರಮಗಳನ್ನು ಕೈಗೊಳ್ಳುವಂತೆ ಪಾಕಿಸ್ತಾನ ಆಗ್ರಹಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

` ಈ ದಾಳಿಯು ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯನ್ನು ಅಸ್ಥಿರಗೊಳಿಸುವ ಉದ್ದೇಶ ಹೊಂದಿತ್ತು ಮತ್ತು ಎರಡು ಸಹೋದರ ದೇಶಗಳ ನಡುವಿನ ಶಾಂತಿಯುತ ಮತ್ತು ಸಹಕಾರಿ ಸಂಬಂಧಗಳ ಮನೋಭಾವವನ್ನು ಉಲ್ಲಂಘಿಸಿದೆ. ಗಡಿಯುದ್ದಕ್ಕೂ ದಾಳಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುವ ಮೂಲಕ ಪಾಕಿಸ್ತಾನ ತನ್ನ ಆತ್ಮರಕ್ಷಣೆಯ ಹಕ್ಕನ್ನು ಚಲಾಯಿಸಿದೆ ಮತ್ತು ತಾಲಿಬಾನ್ ಪಡೆಗಳಿಗೆ ಹಾಗೂ ಅದರೊಂದಿಗೆ ಗುರುತಿಸಿಕೊಂಡಿರುವ ಭಯೋತ್ಪಾದಕ ಸಂಘಟನೆಗಳಿಗೆ ಅಪಾರ ನಷ್ಟ ಉಂಟುಮಾಡಿದೆ' ಎಂದು ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News