ಫ್ಲೋರಿಡಾ ವಿಮಾನ ಪತನ | ಟೆಕ್ ಉದ್ಯಮಿ, ಪತ್ನಿ, ಇಬ್ಬರು ಪುಟ್ಟ ಮಕ್ಕಳು ಮೃತ್ಯು: ಆಸ್ಟಿನ್ ನಿಂದ ಬಹಾಮಾಸ್ ಗೆ ಸ್ನೇಹಿತರೊಂದಿಗೆ ತೆರಳುತ್ತಿದ್ದ ಕುಟುಂಬ
Photo: India Today
ಫ್ಲೋರಿಡಾ: ಅಮೆರಿಕದ ಫ್ಲೋರಿಡಾದಲ್ಲಿ ರವಿವಾರ ಸಂಭವಿಸಿದ ಭೀಕರ ಖಾಸಗಿ ವಿಮಾನ ದುರಂತದಲ್ಲಿ ಟೆಕ್ ಉದ್ಯಮಿ, ಅವರ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ. ಬಹುಪಥ ಹೆದ್ದಾರಿಗೆ ಅಪ್ಪಳಿಸಿದ ಲಿಯರ್‌ಜೆಟ್ 60 ವಿಮಾನ ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ.
ಮೃತರಲ್ಲಿ ಟೆಕ್ಸಾಸ್ ಮೂಲದ ಟೆಕ್ ಉದ್ಯಮಿ ಆಡಮ್ ರಾಬಿನ್ಸನ್, ಅವರ ಪತ್ನಿ ಹೆಲೆನ್ ಶಾರ್ಪ್, ನಾಲ್ಕು ಮತ್ತು ಎರಡು ವರ್ಷ ವಯಸ್ಸಿನ ಇಬ್ಬರು ಮಕ್ಕಳು, ಇತರ ಮೂವರು ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್‌ಗಳು ಸೇರಿದ್ದಾರೆ. ರಾಬಿನ್ಸನ್ ಕುಟುಂಬವು ಸ್ನೇಹಿತರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿತ್ತು.
ಆಸ್ಟಿನ್ ನಿಂದ ಬಹಾಮಾಸ್ ಗೆ ಹೊರಟಿದ್ದ ವಿಮಾನ
ಟೆಕ್ಸಾಸ್ ನ ಆಸ್ಟಿನ್‌ನಿಂದ ಬಹಾಮಾಸ್ ಗೆ ತೆರಳುತ್ತಿದ್ದ ಲಿಯರ್‌ಜೆಟ್ 60 ವಿಮಾನವು ರವಿವಾರ ಫ್ಲೋರಿಡಾದ ಬಹುಪಥ ಹೆದ್ದಾರಿಗೆ ಅಪ್ಪಳಿಸಿತ್ತು. ಢಿಕ್ಕಿಯ ರಭಸಕ್ಕೆ ವಿಮಾನದಲ್ಲಿ ಭಾರಿ ಸ್ಫೋಟ ಸಂಭವಿಸಿತ್ತು.
ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ತನಿಖೆ ನಡೆಸುತ್ತಿದೆ. ವಿಮಾನದಲ್ಲಿ ಮಂಜುಗಡ್ಡೆ ಶೇಖರಣೆಯಾಗಿದ್ದುದೇ, ಹಾರಾಟದ ವೇಳೆ ಎದುರಾದ ವಾಯುಮಂಡಲದ ಪ್ರಕ್ಷುಬ್ಧತೆಯೇ ಅಥವಾ ಮಾನವ ದೋಷವೇ ದುರಂತಕ್ಕೆ ಕಾರಣ ಎಂಬ ಬಗ್ಗೆ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
'ಮಕ್ಕಳೇ ನಮ್ಮ ಬದುಕಿನ ಬೆಳಕು'
ಅಪಘಾತದಲ್ಲಿ ಮೃತಪಟ್ಟ ಆಡಮ್ ರಾಬಿನ್ಸನ್ ಅವರು RB2B ಮತ್ತು Retention.com ಸಂಸ್ಥೆಗಳ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿದ್ದರು. ಮೋಲ್ಟ್ಸೆಟ್ಸ್ ನ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಜಾಗತಿಕ ಹಣಕಾಸು ಸೇವಾ ಸಂಸ್ಥೆ ಲೆಹ್ಮನ್ ಬ್ರದರ್ಸ್ ಮತ್ತು ಬ್ಯಾಂಕಿಂಗ್ ಸಮೂಹ ಬಾರ್ಕ್ಲೇಸ್ ನಲ್ಲಿ ಕೆಲಸ ಮಾಡಿದ್ದರು.
ಅವರ ಪತ್ನಿ ಹೆಲೆನ್ ಶಾರ್ಪ್ ಕಲಾವಿದೆಯಾಗಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಹೆಲೆನ್ ಅವರ ತಂದೆ ಡಡ್ಲಿ ಶಾರ್ಪ್ ಅವರು ತಮ್ಮ ಮಗಳು, ಅಳಿಯ ಮತ್ತು ಇಬ್ಬರು ಮೊಮ್ಮಕ್ಕಳು ವಿಮಾನದಲ್ಲಿದ್ದರು ಎಂದು 'ದಿ ಪಾಮ್ ಬೀಚ್ ಪೋಸ್ಟ್' ಪತ್ರಿಕೆಗೆ ತಿಳಿಸಿದ್ದಾರೆ.
ಮೃತರ ಕುಟುಂಬಗಳ ಪೈಕಿ ಕೆಲವರು ಜಂಟಿಯಾಗಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆಡಮ್ ಮತ್ತು ಹೆಲೆನ್ ಅವರನ್ನು 'ಅರ್ಪಣಾ ಮನೋಭಾವದ ಪೋಷಕರು' ಎಂದು ಬಣ್ಣಿಸಿದ್ದಾರೆ. ಇಬ್ಬರು ಮಕ್ಕಳು ಅವರ ಬದುಕಿನ ಬೆಳಕಾಗಿದ್ದರು ಎಂದು ಸ್ಮರಿಸಿದ್ದಾರೆ.
'ಹೆಲೆನ್ ಮತ್ತು ಆಡಮ್ ಅವರದ್ದು ಎಂದೆಂದಿಗೂ ಉಳಿಯುವ ಪ್ರೇಮ ಸಂಬಂಧವಾಗಿತ್ತು. ಅವರ ಆತ್ಮೀಯತೆ, ಔದಾರ್ಯ ಮತ್ತು ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಳ್ಳುವ ಗುಣ ಅನೇಕರನ್ನು ಸ್ಪರ್ಶಿಸಿತ್ತು' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.