Photo Credit : NDTV 

ಹೂಸ್ಟನ್: ಮಗಳ ಪಾಲನೆ ಹಕ್ಕು (ಕಸ್ಟಡಿ) ಮಾಜಿ ಪತಿಗೆ ನೀಡಿದ ನ್ಯಾಯಾಲಯದ ತೀರ್ಪು ಹೊರಬಂದ ಕೆಲವೇ ಗಂಟೆಗಳಲ್ಲಿ ಟೆಕ್ಸಾಸ್‌ ನ ಮಹಿಳೆಯೊಬ್ಬರು ತಮ್ಮ ನಾಲ್ಕು ವರ್ಷದ ಮಗಳನ್ನು ಗುಂಡಿಕ್ಕಿ ಕೊಂದು, ಬಳಿಕ ತಾವೂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.

35 ವರ್ಷದ ಸಿಬೆಲ್ಲೆ ಸವೆಲ್ಲಾ ಅವರು ಮಂಗಳವಾರ ಸಂಜೆ ತಮ್ಮ ಮಗಳು ವಿವಿಯನ್ನನ್ನು ಮಾಜಿ ಪತಿ ಆರನ್ ಸವೆಲ್ಲಾ ಅವರಿಗೆ ಒಪ್ಪಿಸಬೇಕಿತ್ತು. ಆದರೆ, ಹೂಸ್ಟನ್‌ ನಲ್ಲಿರುವ ತಮ್ಮ ಮನೆಯಲ್ಲಿ ಮಗಳ ಮೇಲೆ ಗುಂಡು ಹಾರಿಸಿ ಕೊಂದ ಬಳಿಕ ತಾವೂ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಹೂಸ್ಟನ್ ಪೊಲೀಸ್ ಇಲಾಖೆ ಹಾಗೂ ಕುಟುಂಬದ ಪರ ವಕೀಲರು ತಿಳಿಸಿದ್ದಾರೆ.

ಅದೇ ದಿನ ನಡೆದ ಕಸ್ಟಡಿ ವಿಚಾರಣೆಯಲ್ಲಿ ವಿವಿಯನ್ ನ ಪಾಲನೆಯ ಮುಖ್ಯ ಜವಾಬ್ದಾರಿಯನ್ನು ಆರನ್ ಅವರಿಗೆ ನೀಡಲಾಗಿತ್ತು. ಮಂಗಳವಾರ ಸಂಜೆ ವಿವಿಯನ್ ತಂದೆಯ ಮನೆಗೆ ಮರಳಬೇಕಿತ್ತು ಎಂದು ಆರನ್ ಅವರ ಕುಟುಂಬ ತಿಳಿಸಿದೆ.

ಮನೆಗೆ ತೆರಳಿದ ಪೊಲೀಸರಿಗೆ ಆಘಾತ

ಸಂಜೆ 5.45ರ ಸುಮಾರಿಗೆ ಸಿಬೆಲ್ಲೆ ಅವರ ಮನೆಗೆ ಪೊಲೀಸರು ತೆರಳಿದಾಗ ವಿವಿಯನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮನೆಯ ಮೂರನೇ ಮಹಡಿಯಲ್ಲಿ ಸಿಬೆಲ್ಲೆ ಸ್ವತಃ ಗುಂಡು ಹಾರಿಸಿಕೊಂಡು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಒಂದು ದಿನದ ಬಳಿಕ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.

ಆರನ್ ಅವರ ಕುಟುಂಬವು ವಕೀಲ ಸ್ಟೆಫಾನಿ ಶಾಪಿರೋ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ವಿವಿಯನ್ ಅಂದು ಸಂಜೆ ತನ್ನ ತಂದೆಯ ಮನೆಗೆ ಮರಳಬೇಕಿತ್ತು” ಎಂದು ತಿಳಿಸಿದೆ.

“ನಮ್ಮ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ವಿವಿಯನ್ ನಾಲ್ಕು ವರ್ಷದವಳಾಗಿದ್ದಳು. ಅವಳ ತಂದೆ ಆರನ್ ಮತ್ತು ಅವಳ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಅವಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ನಮ್ಮಿಂದ ಕಸಿದುಕೊಳ್ಳಲಾದ ಈ ನಷ್ಟವನ್ನು ವಿವರಿಸಲು ಪದಗಳೇ ಇಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

“ತನ್ನ ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಪೋಷಕರೊಬ್ಬರಿಂದ ಕಾನೂನು ನಿರೀಕ್ಷಿಸುವ ಎಲ್ಲವನ್ನೂ ಆರನ್ ಮಾಡಿದ್ದರು. ಅವರು ನ್ಯಾಯಾಲಯಗಳ ಮೇಲೆ ನಂಬಿಕೆ ಇಟ್ಟಿದ್ದರು. ಪ್ರತಿಯೊಂದು ಆದೇಶವನ್ನೂ ಪಾಲಿಸಿದ್ದರು. ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾದಿದ್ದರು. ಮಂಗಳವಾರ ನ್ಯಾಯಾಧೀಶರು ವಿವಿಯನ್ನ ಪಾಲನೆಯ ಮುಖ್ಯ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದರು. ಅವಳು ಅಂದು ಸಂಜೆ ಅವರ ಮನೆಗೆ ಬರಬೇಕಿತ್ತು. ಆದರೆ, ಅವಳು ಎಂದಿಗೂ ಬರಲಿಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಸಿಬೆಲ್ಲೆ ಅವರ ಹೊಸ ಪತಿ, ರೆಸ್ಟೋರೆಂಟ್ ಮಾಲೀಕ ಗ್ರೆಗ್ ಕುಬಾಲಾ ಹಾಗೂ ಮಗುವನ್ನು ನೋಡಿಕೊಳ್ಳುತ್ತಿದ್ದ ಬೇಬಿಸಿಟ್ಟರ್ ಮನೆಯಲ್ಲಿದ್ದರು ಎಂದು ಪೊಲೀಸರು ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರು ಗುಂಡಿನ ದಾಳಿಯಲ್ಲಿ ಭಾಗಿಯಾಗಿಲ್ಲ ಎಂದು ನಂಬಲಾಗಿದೆ ಎಂದು ‘NY ಪೋಸ್ಟ್’ ವರದಿ ಮಾಡಿದೆ.

ಘಟನೆಯ ಬಳಿಕ ಹೂಸ್ಟನ್ ಪೊಲೀಸ್ ಲೆಫ್ಟಿನೆಂಟ್ ಲ್ಯಾರಿ ಕ್ರೌಸನ್, “ಮಗುವಿನ ಪಾಲನೆ ಹಕ್ಕಿಗೆ ಸಂಬಂಧಿಸಿದ ವಿಚಾರಣೆ ಇಂದು ಮುಂಜಾನೆ ನಡೆದಿತ್ತು. ಅದು ತಾಯಿಗೆ ಅನುಕೂಲಕರವಾಗಿರಲಿಲ್ಲ” ಎಂದು ತಿಳಿಸಿದ್ದಾರೆ.

ಮಕ್ಕಳ ರಕ್ಷಣೆಗಾಗಿ ಕಾನೂನಿನ ಚೌಕಟ್ಟಿನೊಳಗೆ ಶಾಂತವಾಗಿ, ತಾಳ್ಮೆಯಿಂದ ಹೋರಾಡುವ ತಂದೆಯರ ಕಥೆಗಳು ಅಪರೂಪಕ್ಕೆ ಮಾತ್ರ ಹೊರಬರುತ್ತವೆ ಎಂದೂ ಅವರು ಹೇಳಿದ್ದಾರೆ.

ಸಿಬೆಲ್ಲೆ ಅವರು ವಿವಿಯನ್ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರನ್ ಎಂದಿಗೂ ಆರೋಪಿಸಿರಲಿಲ್ಲ. ಆದರೆ, ಮಗಳಿಗೆ “ಭಾವನಾತ್ಮಕ ದೌರ್ಜನ್ಯವಾಗುವ ಸಾಧ್ಯತೆಯಿದೆ” ಎಂದು ಆರನ್ ನಂಬಿದ್ದರು ಎಂದು ಅವರ ಪರ ವಕೀಲ ಸ್ಟೆಫಾನಿ ಶಾಪಿರೋ ತಿಳಿಸಿದ್ದಾರೆ.

ಮೂಲತಃ ಬ್ರೆಝಿಲ್‌ ನವರಾದ ಸಿಬೆಲ್ಲೆ ಅವರು ನಾಲ್ಕು ವರ್ಷಗಳ ದಾಂಪತ್ಯ ಜೀವನದ ಬಳಿಕ 2024ರ ನವೆಂಬರ್‌ ನಲ್ಲಿ ಆರನ್ ಅವರಿಂದ ವಿಚ್ಛೇದನ ಪಡೆದಿದ್ದರು. ಬಳಿಕ ಮಗಳ ಪಾಲನೆ ಹಕ್ಕಿಗಾಗಿ ಇಬ್ಬರೂ ಕಾನೂನು ಹೋರಾಟ ನಡೆಸುತ್ತಿದ್ದರು.

ಅಮೆರಿಕದ ಮಾಧ್ಯಮಗಳು ಉಲ್ಲೇಖಿಸಿರುವ ನ್ಯಾಯಾಲಯದ ದಾಖಲೆಗಳ ಪ್ರಕಾರ, ವಿವಿಯನ್ ಅವರ ಆರೈಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಶೇಷ ಹಕ್ಕನ್ನು ಆರನ್ ಅವರಿಗೆ ನೀಡಲಾಗಿತ್ತು. ಸಿಬೆಲ್ಲೆ ಅವರಿಗೆ ಟೆಕ್ಸಾಸ್ ಮೂಲದ ಸಂಸ್ಥೆಯೊಂದರ ಮೇಲ್ವಿಚಾರಣೆಯಲ್ಲಿ ಮಾತ್ರ ಮಗಳೊಂದಿಗೆ ಸಮಯ ಕಳೆಯಲು ಅವಕಾಶ ನೀಡಲಾಗಿತ್ತು.

ವಿವಿಯನ್ ಅವರ ಶಾಲಾ ಚಟುವಟಿಕೆಗಳು ಮತ್ತು ವೈದ್ಯಕೀಯ ನಿರ್ಧಾರಗಳಲ್ಲಿ ಸಿಬೆಲ್ಲೆ ಅವರ ಭಾಗವಹಿಸುವಿಕೆಯ ಮೇಲೂ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು. ಅಲ್ಲದೆ, ಮಗಳ ಪಾಲನೆಗಾಗಿ ಹಣ ಪಾವತಿಸುವಂತೆ ಹಾಗೂ ಮಗಳ ವೈದ್ಯಕೀಯ ವೆಚ್ಚದಲ್ಲಿ ತಮ್ಮ ಜೇಬಿನಿಂದ ಭರಿಸಬೇಕಾದ ಮೊತ್ತದ ಅರ್ಧದಷ್ಟು ಹಣವನ್ನು ಪಾವತಿಸುವಂತೆ ಅವರಿಗೆ ಆದೇಶಿಸಲಾಗಿತ್ತು.

ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿರುವ ವರದಿಗಳ ಪ್ರಕಾರ, ಭೇಟಿಯ ಸಂದರ್ಭದಲ್ಲಿ ಹಾಜರಿರುವ ಮೇಲ್ವಿಚಾರಕರು ಪೋರ್ಚುಗೀಸ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗದಿದ್ದರೆ, ಆ ಭಾಷೆಯಲ್ಲಿ ವಿವಿಯನ್ ಅವರೊಂದಿಗೆ ಮಾತನಾಡದಂತೆಯೂ ಸಿಬೆಲ್ಲೆ ಅವರಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಬಂಧಗಳನ್ನು ನ್ಯಾಯಾಲಯ ಏಕೆ ವಿಧಿಸಿತು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಗುಂಡಿನ ದಾಳಿಯ ಸುತ್ತಲಿನ ಸನ್ನಿವೇಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor