Photo: x.com/CNNnews18

ಹೊಸದಿಲ್ಲಿ, ಅ.3: ಹಾರ್ಮುಝ್ ಜಲಸಂಧಿಯಲ್ಲಿ ಕ್ಷಿಪಣಿ ಅಥವಾ ಪ್ರಕ್ಷೇಪಕವೊಂದರ ದಾಳಿಗೆ ಒಳಗಾದ ಕುವೈತ್ ಧ್ವಜ ಹೊಂದಿರುವ ಕಚ್ಚಾ ತೈಲ ಟ್ಯಾಂಕರ್‌ನಲ್ಲಿದ್ದ ಐವರು ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಒಮಾನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶುಕ್ರವಾರ ತಿಳಿಸಿದೆ.

‘MT Kazimah IIIʼ ಹಡಗಿನಲ್ಲಿ ಐವರು ಭಾರತೀಯರು ಇದ್ದರು. ಆಯಕಟ್ಟಿನ ಜಲಮಾರ್ಗವಾದ ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತಿದ್ದಾಗ ಹಡಗು ದಾಳಿಗೆ ಒಳಗಾಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ಭಾರತೀಯ ರಾಯಭಾರ ಕಚೇರಿ ಸಂಯೋಜಿಸಿದ್ದು, ಐವರನ್ನೂ ಸುರಕ್ಷಿತವಾಗಿ ದಡಕ್ಕೆ ಸ್ಥಳಾಂತರಿಸಲಾಗಿದೆ.

‘ಎಕ್ಸ್’ನಲ್ಲಿ ರಾಯಭಾರ ಕಚೇರಿ ಪ್ರಕಟಿಸಿದ ಪೋಸ್ಟ್‌ನಲ್ಲಿ, ‘ಇಂದು ಮುಂಜಾನೆ ಹಾರ್ಮುಝ್ ಜಲಸಂಧಿಯಲ್ಲಿ ಪ್ರಕ್ಷೇಪಕವೊಂದರ ದಾಳಿಗೆ ಒಳಗಾದ ಕುವೈತ್ ಧ್ವಜದ ಟ್ಯಾಂಕರ್ ‘MT Kazimah IIIʼ ನಲ್ಲಿದ್ದ ಐವರು ಭಾರತೀಯರ ರಕ್ಷಣಾ ಕಾರ್ಯಾಚರಣೆಯನ್ನು ನಮ್ಮ ನಿಯೋಗವು ಸಂಯೋಜಿಸಿತು. ಐವರು ಭಾರತೀಯರನ್ನು ಸುರಕ್ಷಿತವಾಗಿ ದಡಕ್ಕೆ ಸ್ಥಳಾಂತರಿಸಲಾಗಿದೆ. ನಿರಂತರ ಬೆಂಬಲ ಮತ್ತು ಸಹಾಯಕ್ಕಾಗಿ ಒಮನ್ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇವೆ’ ಎಂದು ತಿಳಿಸಿದೆ.

‘MT Kazimah III’ ಕುವೈತ್ ಧ್ವಜದಡಿ ಸಂಚರಿಸುವ ಕಚ್ಚಾ ತೈಲ ಟ್ಯಾಂಕರ್ ಆಗಿದ್ದು, ದಾಳಿಗೆ ಒಳಗಾದ ಸಂದರ್ಭದಲ್ಲಿ ಟೋಗೊದ ಲೋಮೆ ಬಂದರಿನತ್ತ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

ಪರ್ಷಿಯನ್ ಕೊಲ್ಲಿ ಹಾಗೂ ಇತರ ಪ್ರಮುಖ ನೌಕಾಯಾನ ಮಾರ್ಗಗಳಲ್ಲಿ ಭದ್ರತಾ ಅಪಾಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ನಾವಿಕರ ಸುರಕ್ಷತೆಯ ಮೇಲ್ವಿಚಾರಣೆಯನ್ನು ತೀವ್ರಗೊಳಿಸುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.

4,500ಕ್ಕೂ ಹೆಚ್ಚು ಭಾರತೀಯ ನಾವಿಕರು

ಇದಕ್ಕೂ ಮುನ್ನ ಮಂಗಳವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಾಣಿಜ್ಯ ಹಡಗುಗಳಲ್ಲಿ 4,500ಕ್ಕೂ ಹೆಚ್ಚು ಭಾರತೀಯ ನಾವಿಕರು ಇದ್ದಾರೆ ಎಂದು ತಿಳಿಸಿದ್ದರು.

ಭಾರತಕ್ಕೆ ಸರಕು ಸಾಗಿಸುತ್ತಿರುವ ಭಾರತೀಯ ಧ್ವಜದ ಆರು ಹಡಗುಗಳು ಮತ್ತು ವಿದೇಶಿ ಧ್ವಜದ ಆರು ಹಡಗುಗಳು ಸೇರಿದಂತೆ ಪರ್ಷಿಯನ್ ಕೊಲ್ಲಿಯಲ್ಲಿ ಒಟ್ಟು 12 ಸಕ್ರಿಯ ಸರಕು ಸಾಗಣೆ ಹಡಗುಗಳಿದ್ದು, ಅವುಗಳಲ್ಲಿ 163 ಭಾರತೀಯ ನಾವಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದರು.

‘ಪ್ರಸ್ತುತ ಪರ್ಷಿಯನ್ ಕೊಲ್ಲಿಯಲ್ಲಿ ಭಾರತೀಯ ಧ್ವಜ ಹೊಂದಿರುವ ಆರು ವಾಣಿಜ್ಯ ಹಡಗುಗಳಿವೆ. ಹಾಗೆಯೇ ಭಾರತಕ್ಕೆ ಸರಕು ಸಾಗಿಸುತ್ತಿರುವ ವಿದೇಶಿ ಧ್ವಜದ ಆರು ಹಡಗುಗಳೂ ಇವೆ. ಹೀಗೆ ಒಟ್ಟು 12 ಹಡಗುಗಳಿವೆ. ಈ ಹಡಗುಗಳಲ್ಲಿ ಸುಮಾರು 163 ಭಾರತೀಯ ನಾವಿಕರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಜೈಸ್ವಾಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು.

‘ಇದರ ಹೊರತಾಗಿ, ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಿವಿಧ ವಾಣಿಜ್ಯ ಹಡಗುಗಳಲ್ಲಿ 4,500ಕ್ಕೂ ಹೆಚ್ಚು ಭಾರತೀಯ ನಾವಿಕರು ಇದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದರು.

ಹಡಗುಗಳ ಚಲನವಲನವನ್ನು ಗಮನಿಸಲು ಹಾಗೂ ಭಾರತೀಯ ನಾವಿಕರ ಕ್ಷೇಮವನ್ನು ಮೇಲ್ವಿಚಾರಣೆ ಮಾಡಲು ನೌಕಾಯಾನ ಸಚಿವಾಲಯವು ಭಾರತೀಯ ರಾಜತಾಂತ್ರಿಕ ಕಚೇರಿಗಳು ಮತ್ತು ಸ್ಥಳೀಯ ಪಾಲುದಾರರೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.

‘ನಮ್ಮ ನೌಕಾಯಾನ ಸಚಿವಾಲಯವು ಈ ಹಡಗುಗಳ ಚಲನವಲನವನ್ನು ನಿರಂತರವಾಗಿ ಗಮನಿಸುತ್ತಿದೆ ಮತ್ತು ಈ ಎಲ್ಲ ನಾವಿಕರ ಯೋಗಕ್ಷೇಮದ ಬಗ್ಗೆ ನಿಗಾ ವಹಿಸಿದೆ. ಅಗತ್ಯವಿದ್ದಾಗಲೆಲ್ಲಾ ನಮ್ಮ ರಾಯಭಾರ ಕಚೇರಿಗಳು ಮತ್ತು ಇತರ ಪಾಲುದಾರರ ಮೂಲಕ ಅವರ ಯೋಗಕ್ಷೇಮ ಹಾಗೂ ಕಲ್ಯಾಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದ್ದರು.

‘ವಿದೇಶದಲ್ಲಿರುವ ನಮ್ಮ ನಾವಿಕ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಜೈಸ್ವಾಲ್ ಹೇಳಿದ್ದಾರೆ.

ವಾಣಿಜ್ಯ ನೌಕಾಯಾನಕ್ಕೆ ಹೆಚ್ಚಿದ ಅಪಾಯ

ಪರ್ಷಿಯನ್ ಕೊಲ್ಲಿ, ಕೆಂಪು ಸಮುದ್ರ ಮತ್ತು ಕಪ್ಪು ಸಮುದ್ರದಾದ್ಯಂತ ವಾಣಿಜ್ಯ ನೌಕಾಯಾನಕ್ಕೆ ಅಪಾಯಗಳು ಹೆಚ್ಚುತ್ತಿರುವ ನಡುವೆಯೇ ಈ ಘಟನೆ ನಡೆದಿದೆ. ಈ ಪ್ರದೇಶಗಳಲ್ಲಿ ಹಡಗುಗಳು ಪದೇಪದೇ ದಾಳಿಗೆ ಒಳಗಾಗುತ್ತಿವೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಕಳೆದ ವಾರ ನಡೆದ 81ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ, ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

‘ಭೂಮಿಯ ಮೇಲಿನ ದೀರ್ಘಕಾಲದ ಸವಾಲುಗಳಿಗೆ ಈಗ ಸಮುದ್ರ ವಲಯದಲ್ಲಿಯೂ ಹೊಸ ಸವಾಲುಗಳು ಸೇರಿಕೊಂಡಿವೆ. ಕೊಲ್ಲಿ ಪ್ರದೇಶದಿಂದ ಹಿಡಿದು ಕೆಂಪು ಸಮುದ್ರ ಮತ್ತು ಕಪ್ಪು ಸಮುದ್ರದವರೆಗೆ ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲೆ ದಾಳಿಗಳು ನಡೆದಿವೆ. ಇದರಲ್ಲಿ ಭಾರತೀಯ ನಾವಿಕರು ಹಾಗೂ ಇತರ ರಾಷ್ಟ್ರಗಳ ನಾವಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಜೈಶಂಕರ್ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor