ಚುನಾವಣೆಯಲ್ಲಿ ಸ್ಪರ್ಧೆ ನಿಶ್ಚಿತ ಇಮ್ರಾನ್ ಪಕ್ಷದ ಘೋಷಣೆ
Photo:PTI
ಇಸ್ಲಮಬಾದ್ : ಪಕ್ಷದ ಚುನಾವಣಾ ಚಿಹ್ನೆಯಾದ ಕ್ರಿಕೆಟ್ ಬ್ಯಾಟ್ ಬಳಸುವುದನ್ನು ತಡೆಹಿಡಿದ ಪಾಕಿಸ್ತಾನ ಚುನಾವಣಾ ಆಯೋಗದ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದರೂ, ಫೆಬ್ರವರಿ 8ರಂದು ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಸ್ಫರ್ಧಿಸಲು ನಿರ್ಧರಿಸಿದೆ ಎಂದು ಪಕ್ಷದ ಮುಖಂಡ ಬ್ಯಾರಿಸ್ಟರ್ ಗೋಹರ್ ಖಾನ್ ಹೇಳಿದ್ದಾರೆ.
ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಕ್ಷದ `ಕ್ರಿಕೆಟ್ ಬ್ಯಾಟ್' ಚಿಹ್ನೆ ಜನಪ್ರಿಯವಾಗಿತ್ತು. ಆದರೆ ಪಕ್ಷದ ಆಂತರಿಕ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಹೇಳಿದ್ದ ಪಾಕ್ ಚುನಾವಣಾ ಆಯೋಗ ಬ್ಯಾಟ್ ಚಿಹ್ನೆಯನ್ನು ತಡೆಹಿಡಿದಿತ್ತು. ಇದನ್ನು ಪ್ರಶ್ನಿಸಿ ಪಿಟಿಐ ಪಕ್ಷ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಆಂತರಿಕ ಚುನಾವಣೆ ಪಕ್ಷದ ಸಂವಿಧಾನಕ್ಕೆ ಅನುಗುಣವಾಗಿ ನಡೆದಿಲ್ಲ ಎಂಬುದು ಸಾಬೀತಾಗಿರುವುದರಿಂದ ಚುನಾವಣಾ ಆಯೋಗದ ಆದೇಶಕ್ಕೆ ತಡೆನೀಡಲಾಗದು ಎಂದು ತೀರ್ಪು ನೀಡಿತ್ತು.
ಇದೀಗ ಸ್ವತಂತ್ರ ಅಭ್ಯರ್ಥಿಗಳಾಗಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಗೋಹರ್‍ಖಾನ್ ಹೇಳಿದ್ದಾರೆ.