ವಿಶ್ವಬ್ಯಾಂಕ್ ಇನ್ನಷ್ಟು ದೊಡ್ಡದಾಗಬೇಕು ; ಅಧ್ಯಕ್ಷ ಅಜಯ್ ಬಂಗಾ
ಅಜಯ್ ಬಾಂಗ (PTI)
ನ್ಯೂಯಾರ್ಕ್: ಮುಂದಿನ ದಶಕದಲ್ಲಿ ವಿಶ್ವಬ್ಯಾಂಕ್ ತನ್ನ ಸಾಲ ನೀಡುವ ಸಾಮಥ್ರ್ಯವನ್ನು 150 ಶತಕೋಟಿ ಡಾಲರ್ ಗೆ ಹೆಚ್ಚಿಸಬಹುದು. ಆದರೆ ಜಾಗತಿಕ ಸವಾಲುಗಳಿಗೆ ಪ್ರತಿಕ್ರಿಯಿಸಲು ಅದು ಇನ್ನಷ್ಟು ದೊಡ್ಡದಾಗುವ ಅಗತ್ಯವಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಬುಧವಾರ ಹೇಳಿದ್ದಾರೆ.
ಹವಾಮಾನ ಬದಲಾವಣೆ, ಸಾಲ ಮತ್ತು ಬಡತನದ ಸವಾಲನ್ನು ಎದುರಿಸಲು ವಿಶ್ವಬ್ಯಾಂಕ್ ಹಾಗೂ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯನ್ನು ಸುಧಾರಿಸುವುದು ಮೊರಕ್ಕೋದ ಮರಕ್ಕೇಶ್ ನಲ್ಲಿ ನಡೆದ ವಿಶ್ವಬ್ಯಾಂಕ್ ವಾರ್ಷಿಕ ಮಹಾಸಭೆಯ ಕೇಂದ್ರ ವಿಷಯವಾಗಿತ್ತು.
ವಾಸಯೋಗ್ಯ ಭೂಮಿಯಲ್ಲಿ ಬಡತನ ನಿರ್ಮೂಲನೆ ಕಡೆಗೆ ಬ್ಯಾಂಕ್ ನ ದೃಷ್ಟಿಕೋನವನ್ನು ಮರು ವ್ಯಾಖ್ಯಾನಿಸುವ ನಿಟ್ಟಿನಲ್ಲಿ ತನ್ನ ಯೋಜನೆಗಳನ್ನು ಅಜಯ್ ಬಂಗಾ ಸಭೆಯಲ್ಲಿ ಪ್ರಸ್ತುತಪಡಿಸಿದರು. ಬಡತನ, ಸಾಂಕ್ರಾಮಿಕಗಳು ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಸವಾಲುಗಳು `ಬಹುತೇಕ ಪರಿಪೂರ್ಣ ಚಂಡಮಾರುತದಂತಿವೆ' ಮತ್ತು ಇವನ್ನು ಪ್ರತ್ಯೇಕ ಸಮಸ್ಯೆಯೆಂದು ಪರಿಗಣಿಸುವಂತಿಲ್ಲ. ಬಜೆಟ್ ನಲ್ಲಿ ಬದಲಾವಣೆ ಮತ್ತು ರಾಷ್ಟ್ರಗಳಿಂದ ದೇಣಿಗೆಯು ವಿಶ್ವಬ್ಯಾಂಕ್ ನ ಸಾಲ ನೀಡುವ ಸಾಮರ್ಥ್ಯವನ್ನು ಮುಂದಿನ ದಶಕದಲ್ಲಿ 150 ಶತಕೋಟಿ ಡಾಲರ್ ಗೆ ಹೆಚ್ಚಿಸಬಹುದು. ಇದು ಗಣನೀಯ ಪ್ರಮಾಣವಾಗಿದ್ದರೂ ಪ್ರಪಂಚದ ಸವಾಲಿನ ಎದುರು ಇದು ಸಾಕಾಗದು. ಆದ್ದರಿಂದ ನಿಸ್ಸಂದೇಹವಾಗಿ ನಮಗೆ ದೊಡ್ಡ ಬ್ಯಾಂಕಿನ ಅಗತ್ಯವಿದೆ ಎಂದವರು ಹೇಳಿದ್ದಾರೆ. ಈ ಕುರಿತು ಜಿ20 ತಜ್ಞರ ತಂಡ ತನ್ನ ವರದಿ ಮಂಡಿಸಿದ್ದು ಅದನ್ನು ಜಿ20 ಒಕ್ಕೂಟ ಇನ್ನಷ್ಟೇ ಅನುಮೋದಿಸಬೇಕಿದೆ. ಆದರೆ ದೊಡ್ಡ ಬ್ಯಾಂಕ್ ನ ಅಗತ್ಯದ ಬಗ್ಗೆ ನನ್ನ ನಿಲುವನ್ನು ಶೇರುದಾರರ ಸಭೆಯ ಮುಂದಿರಿಸುತ್ತೇನೆ ಎಂದು ಬಂಗಾ ಹೇಳಿದ್ದಾರೆ.