ಮದ್ದುಗುಂಡುಗಳ ಕೊರತೆಯಿಲ್ಲ: ಡೊನಾಲ್ಡ್ ಟ್ರಂಪ್

ಮಾಹಿತಿ ಸೋರಿಕೆ ಮಾಡುವವರಿಗೆ ಜೈಲಿನ ಎಚ್ಚರಿಕೆ

Update: 2026-08-07 10:48 IST

ಡೊನಾಲ್ಡ್ ಟ್ರಂಪ್ | Photo Credit : PTI  

ವಾಶಿಂಗ್ಟನ್, ಆ. 6: ದೇಶದಲ್ಲಿ ಮದ್ದುಗುಂಡುಗಳ ಕೊರತೆಯಿದೆ ಎಂಬುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ ಹಾಗೂ ದೇಶದಲ್ಲಿ ಶಸ್ತ್ರಾಸ್ತ್ರಗಳ ಬೃಹತ್ ಸಂಗ್ರಹವಿದೆ ಎಂದು ಹೇಳಿದ್ದಾರೆ.

ಅದೇ ವೇಳೆ, ಶಸ್ತ್ರಾಸ್ತ್ರಗಳ ಕೊರತೆಯಿದೆ ಎಂದು ಹೇಳಿಕೊಳ್ಳುವವರನ್ನು ಶಿಕ್ಷಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ದೂರಗಾಮಿ ಮಾರ್ಗದರ್ಶಿತ ಕ್ಷಿಪಣಿಗಳು ಮತ್ತು ವಾಯು ಆಕ್ರಮಣ ತಡೆ (ಇಂಟರ್‌ಸೆಪ್ಟರ್) ಮುಂತಾದ ಶಸ್ತ್ರಾಸ್ತ್ರಗಳ ಕೊರತೆಗೆ ಸಂಬಂಧಿಸಿ ಟ್ರಂಪ್, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬುದಾಗಿ ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿತ್ತು. ಈ ಶಸ್ತ್ರಾಸ್ತ್ರಗಳ ಕೊರತೆಯು ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಸೇನಾ ಆಯ್ಕೆಗಳನ್ನು ಸೀಮಿತಗೊಳಿಸಬಹುದಾಗಿದೆ ಎನ್ನಲಾಗಿದೆ.

ವರದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆ ನೀಡಿದ್ದಾರೆ.

‘ರಕ್ಷಣಾ ಸಲಕರಣೆಗಳ ಉತ್ಪಾದಕ ಕಂಪೆನಿಗಳು ನಮ್ಮ ದೇಶದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ಕಾರ್ಖಾನೆಗಳು ಮತ್ತು ಉತ್ಪಾದನಾ ಘಟಕಗಳನ್ನು ನಿರ್ಮಿಸುತ್ತಿವೆ’ ಎಂದು ಟ್ರಂಪ್ ತನ್ನ ‘ಟ್ರುತ್ ಸೋಶಿಯಲ್’ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

ದೇಶದ್ರೋಹಿ ಹೇಳಿಕೆಗಳನ್ನು ನೀಡುತ್ತಿರುವ ಮಾಹಿತಿ ಸೋರಿಕೆದಾರರನ್ನು ತನಿಖೆಗೊಳಪಡಿಸಲಾಗುತ್ತಿದ್ದು, ಅವರಿಗೆ ದೀರ್ಘಾವಧಿಯ ಜೈಲು ಶಿಕ್ಷೆಯನ್ನು ವಿಧಿಸಲು ಕೋರಲಾಗುವುದು ಎಂಬುದಾಗಿಯೂ ಅವರು ಹೇಳಿದ್ದಾರೆ.

ಶಸ್ತ್ರಾಸ್ತ್ರಗಳ ಕೊರತೆಯ ವಿಚಾರದಲ್ಲಿ ತನಗೆ ತಪ್ಪು ಮಾಹಿತಿ ನೀಡಲಾಗಿದೆ ಎಂಬುದಾಗಿ ಟ್ರಂಪ್ ಕಳೆದ ವಾರ ನಡೆದ ಸಂಪುಟ ಸಭೆಯ ನೇಪಥ್ಯದಲ್ಲಿ ಹೆಗ್ಸೆತ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತೀಚಿನ ದಿನಗಳಲ್ಲಿ ಇರಾನ್ ವಿರುದ್ಧದ ದಾಳಿಯನ್ನು ಟ್ರಂಪ್ ಕೈಬಿಡಲು ಪ್ರಮುಖ ಕ್ಷಿಪಣಿಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಅಭಾವವೇ ಕಾರಣ ಎಂಬುದಾಗಿ ಮೂಲಗಳನ್ನು ಉಲ್ಲೇಖಿಸಿ ‘ವಾಶಿಂಗ್ಟನ್ ಪೋಸ್ಟ್’ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News