ಜನ್ಮಸಿದ್ಧ ಪೌರತ್ವವನ್ನು ಗುರಿಯಾಗಿಸಿ ಎರಡು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್ : ಜನ್ಮಸಿದ್ಧ ಪೌರತ್ವವನ್ನು ಮತ್ತಷ್ಟು ನಿರ್ಬಂಧಿಸಲು ಬಯಸುವ ಎರಡು ಕಾರ್ಯಕಾರಿ ಆದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸಹಿ ಹಾಕಿದ್ದಾರೆ. ಸುಪ್ರೀಂ ಕೋರ್ಟ್ ಅವರ ಹಿಂದಿನ ಪ್ರಯತ್ನವನ್ನು ಅಸಾಂವಿಧಾನಿಕ ಎಂದು ತಿರಸ್ಕರಿಸಿದ ವಾರಗಳ ಬಳಿಕ ಈ ಆದೇಶ ಹೊರಬಂದಿದೆ.
ಹೊಸ ಆದೇಶಗಳು ಟ್ರಂಪ್ ಅವರ ಹಿಂದಿನ ನಿರ್ದೇಶನಕ್ಕಿಂತ ಹೆಚ್ಚು ಸೀಮಿತ ವ್ಯಾಪ್ತಿಯನ್ನು ಹೊಂದಿವೆ. 14ನೇ ತಿದ್ದುಪಡಿಯ ಪೌರತ್ವ ವಿಧಿಯ ಅಡಿಯಲ್ಲಿ ರಕ್ಷಣೆ ಪಡೆಯಲು ಅರ್ಹರಲ್ಲ ಎಂದು ಆಡಳಿತವು ವಾದಿಸುವ ವರ್ಗಗಳನ್ನು ಈ ಆದೇಶಗಳು ಗುರಿಯಾಗಿಸಿಕೊಂಡಿವೆ.
ಇವುಗಳಲ್ಲಿ ಬರ್ತ್ ಟೂರಿಸಮ್ (ಜನನ ಪ್ರವಾಸೋದ್ಯಮ) ಗಾಗಿ ಅಮೆರಿಕಕ್ಕೆ ಪ್ರಯಾಣಿಸುವ ವ್ಯಕ್ತಿಗಳಿಗೆ ಜನಿಸಿದ ಮಕ್ಕಳು, ಅಮೆರಿಕದಲ್ಲಿರುವ ವಿದೇಶಿ ಸರ್ಕಾರಿ ಉದ್ಯೋಗಿಗಳ ಮಕ್ಕಳು ಮತ್ತು ವಿದೇಶಿ ಶತ್ರುಗಳು ಎಂದು ವರ್ಗೀಕರಿಸಲ್ಪಟ್ಟ ಜನರ ಮಕ್ಕಳು ಸೇರಿದ್ದಾರೆ.
ಅಮೆರಿಕಾ ಕಾಂಗ್ರೆಸ್ (ಸಂಸತ್ತು) ಸ್ವಯಂಚಾಲಿತ ಪೌರತ್ವವನ್ನು ಕೊನೆಗೊಳಿಸುವ ಪ್ರಸ್ತಾವಿತ ಮಸೂದೆಯನ್ನು ಅಂಗೀಕರಿಸಿದರೆ, ಈ ಆದೇಶಗಳು ಅಮೆರಿಕಾದಲ್ಲಿ ಜನಿಸಿದ ಜನರ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.
ಹೊಸ ನಿರ್ದೇಶನಗಳು ಸುಪ್ರೀಂ ಕೋರ್ಟ್‌ನ ಜೂನ್ 30ರ ತೀರ್ಪನ್ನು ಉಲ್ಲಂಘಿಸುವುದಿಲ್ಲ ಎಂದು ಶ್ವೇತಭವನ ಹೇಳಿದೆ. ಸಂವಿಧಾನ ನೀಡಿರುವ ಜನ್ಮಸಿದ್ಧ ಪೌರತ್ವದ ಹಕ್ಕಿನ ವ್ಯಾಪ್ತಿಗೆ ಒಳಪಡದ ವರ್ಗಗಳಿಗೆ ಮಾತ್ರ ಈ ಆದೇಶಗಳು ಅನ್ವಯಿಸುತ್ತವೆ ಎಂದು ಅದು ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶ್ವೇತಭವನದ ಸಹಾಯಕ ಸ್ಟೀಫನ್ ಮಿಲ್ಲರ್, “ಈ ಆದೇಶಕ್ಕೆ ಸಹಿ ಹಾಕಿದ ಕ್ಷಣದಿಂದ ಜನ್ಮ ಪ್ರವಾಸೋದ್ಯಮ ಪದ್ಧತಿಯನ್ನು ನಿಷೇಧಿಸಲಾಗಿದೆ. ಅಂದರೆ, ಈ ಮೋಸದ ಉದ್ದೇಶಕ್ಕಾಗಿ ಇನ್ನು ಮುಂದೆ ಜಗತ್ತಿನ ಯಾರಿಗೂ ವೀಸಾ ಪಡೆಯಲು ಅವಕಾಶವಿರುವುದಿಲ್ಲ” ಎಂದು ಹೇಳಿದರು.
ಸೆಂಟರ್ ಫಾರ್ ಇಮಿಗ್ರೇಷನ್ ಸ್ಟಡೀಸ್‌ನ 2020ರ ಅಂದಾಜಿನ ಪ್ರಕಾರ, 2016 ಮತ್ತು 2017ರ ನಡುವಿನ ಒಂದು ವರ್ಷದ ಅವಧಿಯಲ್ಲಿ 20,000 ರಿಂದ 25,000 ತಾಯಂದಿರು ಜನನ ಪ್ರವಾಸೋದ್ಯಮಕ್ಕಾಗಿ ಅಮೆರಿಕಕ್ಕೆ ಪ್ರಯಾಣಿಸಿದ್ದಾರೆ. ಇತ್ತೀಚಿನ ಇನ್ನೊಂದು ವರದಿಯಲ್ಲಿ ಅಮೆರಿಕದಲ್ಲಿ 2025ರಲ್ಲಿ 36 ಲಕ್ಷ ಜನನಗಳು ದಾಖಲಾಗಿವೆ.