ಶೇಖ್ ಹಸೀನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬೆನ್ನಲ್ಲೇ ಶಕೀಬ್ ನಿವಾಸದ ಮೇಲೆ ದಾಳಿ ಯತ್ನ: ಅವಾಮಿ ಲೀಗ್ ಆರೋಪ

Update: 2026-08-06 12:13 IST

Photo Credit: X | PTI 

ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಭಾಗವಹಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಮಗುರಾ–1 ಕ್ಷೇತ್ರದ ಮಾಜಿ ಸಂಸದ ಶಕೀಬ್ ಅಲ್ ಹಸನ್ ಪಾಲ್ಗೊಂಡ ಬೆನ್ನಲ್ಲೇ ಅವರ ನಿವಾಸದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲು ಯತ್ನಿಸಲಾಗಿದೆ ಎಂದು ಅವಾಮಿ ಲೀಗ್ ಗುರುವಾರ ಆರೋಪಿಸಿದೆ.

ಹೊಸದಿಲ್ಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ (ಎಫ್‌ಸಿಸಿಎಸ್‌ಎ) ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಶೇಖ್ ಹಸೀನಾ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಶಕೀಬ್ ಅಲ್ ಹಸನ್ ಕೂಡ ಉಪಸ್ಥಿತರಿದ್ದರು.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವಾಮಿ ಲೀಗ್, "ಅವಾಮಿ ಲೀಗ್‌ನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದಕ್ಕೆ ತೆರಬೇಕಾದ ಬೆಲೆ ಮನೆಗಳಿಗೆ ಬೆಂಕಿ ಹಚ್ಚುವುದಾಗಿದೆ" ಎಂದು ಆರೋಪಿಸಿದೆ.

"ಇದು ಪೆಟ್ರೋಲ್ ಬಾಂಬ್ ದಾಳಿಯಾಗಿದೆ. ಬಾಂಗ್ಲಾದೇಶದಲ್ಲಿ ನವ-ಫ್ಯಾಸಿಸಂ ಆವರಿಸಿದೆ ಎಂಬುದನ್ನು ಇದು ತೋರಿಸುತ್ತದೆ. ಅವಾಮಿ ಲೀಗ್ ನಾಯಕರು ಹಾಗೂ ಬೆಂಬಲಿಗರ ವಿರುದ್ಧ ನಡೆಯುತ್ತಿರುವ ನಿರಂತರ ಹಿಂಸಾಚಾರದ ಭಾಗವೇ ಈ ದಾಳಿ" ಎಂದು ಪಕ್ಷ ಹೇಳಿದೆ.

ಇದೇ ವೇಳೆ, ಶೇಖ್ ಹಸೀನಾ ಅವರ ಮಾಧ್ಯಮ ಸಂವಾದಕ್ಕೂ ಮುನ್ನ, ಅದರ ಬಗ್ಗೆ ವರದಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ), ಜಮಾತ್-ಎ-ಇಸ್ಲಾಮಿ ಹಾಗೂ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದವು ಎಂದು ಅವಾಮಿ ಲೀಗ್ ಆರೋಪಿಸಿದೆ.

ಶಕೀಬ್ ಅಲ್ ಹಸನ್ ಅವರ ನಿವಾಸದ ಮೇಲಿನ ದಾಳಿ ಪೂರ್ವಯೋಜಿತವಾಗಿದ್ದು, ಅವಾಮಿ ಲೀಗ್ ನಾಯಕರು ಮತ್ತು ಬೆಂಬಲಿಗರ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಮತ್ತೊಂದು ಉದಾಹರಣೆಯಾಗಿದೆ ಎಂದು ಪಕ್ಷ ಹೇಳಿದೆ.

ಪೊಲೀಸರು ಹೇಳಿದ್ದೇನು?

ದಿ ಡೈಲಿ ಸ್ಟಾರ್ ವರದಿ ಪ್ರಕಾರ, ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಮಗುರಾ ಪಟ್ಟಣದ ಕೇಶಬ್ ಮೋರ್ ಪ್ರದೇಶದಲ್ಲಿರುವ ಶಕೀಬ್ ಅವರ ನಿವಾಸಕ್ಕೆ ಅಪರಿಚಿತರು ದಾಳಿ ನಡೆಸಿದ್ದಾರೆ.

ಮಗುರಾ ಸದರ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಎಂಡಿ ಅಬ್ದುಲ್ಲಾ ಅಲ್ ಮಾಮುನ್ ಮಾತನಾಡಿ, ದುಷ್ಕರ್ಮಿಗಳು ಮನೆಗೆ ಇಟ್ಟಿಗೆ ತೂರಿ ಕಿಟಕಿಗಳನ್ನು ಧ್ವಂಸಗೊಳಿಸಿದ್ದು, ಬಳಿಕ ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದಿದ್ದಾರೆ.

ಆದರೆ, ಶಕೀಬ್ ಅಲ್ ಹಸನ್ ಅವರು ಶೇಖ್ ಹಸೀನಾ ಅವರ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದ ಕಾರಣವೇ ಈ ದಾಳಿ ನಡೆದಿದೆ ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News