ಇಸ್ರೇಲ್ ಸೇರಿದಂತೆ ಯಾವುದೇ ದೇಶಗಳಿಗೆ ಅಮೆರಿಕದ ಷರತ್ತಿಲ್ಲದ ಸೇನಾ ನೆರವನ್ನು ವಿರೋಧಿಸಿದ ಅಲ್ ಸಯೀದ್
Photo: x.com/TheBelaaz
ಮಿಚಿಗನ್, ವಾಷಿಂಗ್ಟನ್: ಮಿಚಿಗನ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ಸೆನೆಟ್ ಪ್ರಾಥಮಿಕ ಚುನಾವಣೆಯಲ್ಲಿ ಗೆದ್ದಿರುವ ಅಬ್ದುಲ್ ಅಲ್ ಸಯೀದ್, ಯಾವುದೇ ದೇಶಕ್ಕೆ ಷರತ್ತಿಲ್ಲದೆ ಅಮೆರಿಕ ಸೇನಾ ನೆರವು ನೀಡುವುದನ್ನು ವಿರೋಧಿಸುವುದಾಗಿ ಹೇಳಿದ್ದಾರೆ.
ಚುನಾವಣಾ ಗೆಲುವಿನ ಬಳಿಕ ಸಿಎನ್‌ಎನ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, "ಯಾವುದೇ ದೇಶಕ್ಕೆ ಷರತ್ತಿಲ್ಲದ ಸೇನಾ ನೆರವು ನೀಡುವುದನ್ನು ನಾನು ವಿರೋಧಿಸುತ್ತೇನೆ. ಅದು ಇಸ್ರೇಲ್ ಆಗಿರಬಹುದು. ನನ್ನ ಕುಟುಂಬ ವಲಸೆ ಬಂದ ಈಜಿಪ್ಟ್ ಕೂಡ ಆಗಿರಬಹುದು. ಅದು ಪಾಕಿಸ್ತಾನ, ಸೌದಿ ಅರೇಬಿಯಾ ಅಥವಾ ಯುಎಇ ಕೂಡ ಆಗಿರಬಹುದು" ಎಂದು ವಿದೇಶಿ ಸೇನಾ ನೆರವಿನ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
"ಇದಕ್ಕೆ ಕಾರಣ ಬೇರೆಡೆ ಏನಾಗುತ್ತಿದೆ ಎಂಬುದಕ್ಕಿಂತ, ನಮ್ಮಲ್ಲಿ ಏನಾಗುತ್ತಿದೆ ಎಂಬುದು ನಮ್ಮ ಮೊದಲ ಆದ್ಯತೆಯಾಗಬೇಕು. ನನ್ನ ರಾಜ್ಯದಲ್ಲಿ ಸರಾಸರಿ ಆದಾಯ ಕೇವಲ 14,000 ಡಾಲರ್ ಇರುವ ಜನರಿದ್ದಾರೆ. ಅವರ ತೆರಿಗೆ ಹಣದ ಮೇಲೆ ಅವರಿಗೆ ಹಕ್ಕಿದೆ ಎಂದು ನಾನು ನಂಬುತ್ತೇನೆ" ಎಂದು ಅವರು ತಿಳಿಸಿದರು. ಅಮೆರಿಕದ ತೆರಿಗೆ ಆದಾಯವು ದೇಶೀಯ ಅಗತ್ಯಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ನಾನು ಅಂತರರಾಷ್ಟ್ರೀಯ ಕಾನೂನಿನಲ್ಲಿ ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯುವಲ್ಲಿ ವಿಶ್ವಾಸ ಹೊಂದಿದ್ದೇನೆ. ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿರುವ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ನೀಡುವುದನ್ನು ತಡೆಯುವ 'ಲೆಹಿ ಕಾನೂನುಗಳು' ನಮ್ಮ ದೇಶದಲ್ಲಿ ಇವೆ. ನರಮೇಧ, ವರ್ಣಭೇದ ನೀತಿ ಮಾಡುವ ಅಥವಾ ನಾವು ಹೋರಾಡಬೇಕಿಲ್ಲದ ಯುದ್ಧಕ್ಕೆ ನಮ್ಮನ್ನು ದೂಡುವ ಯಾವುದೇ ವಿದೇಶಿ ಸೇನೆಗೆ ನಾನು ಧನಸಹಾಯ ಮಾಡಲು ಬಯಸುವುದಿಲ್ಲ" ಎಂದು ಅವರು ಮಾನವ ಹಕ್ಕುಗಳ ಬಗೆಗಿನ ಕಾನೂನಿನ ವಿಚಾರಗಳನ್ನು ಪ್ರಸ್ತಾಪಿಸಿದರು.
"ಯಹೂದಿ ಇಸ್ರೇಲಿಗರಿಗೆ ಮತ್ತು ಫೆಲಸ್ತೀನಿಯನ್ನರಿಗೆ ಸಮಾನವಾಗಿ ಶಾಂತಿ, ಘನತೆ ಮತ್ತು ಸ್ವ-ನಿರ್ಣಯದ ಹಕ್ಕುಗಳಿವೆ ಎಂದು ನಾನು ನಂಬುತ್ತೇನೆ" ಎಂದು ಅಲ್ ಸಯೀದ್ ತಿಳಿಸಿದರು.
ಡೆಮಾಕ್ರಟಿಕ್ ಪಕ್ಷದ ನಾಮನಿರ್ದೇಶನದ ಪ್ರಾಥಮಿಕ ಚುನಾವಣೆಯನ್ನು ಗೆದ್ದಿರುವ ಅಲ್ ಸಯೀದ್, ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅದರಲ್ಲಿ ಅವರು ಗೆದ್ದು ಬಂದಲ್ಲಿ ಅಮೆರಿಕದ ಇತಿಹಾಸದ ಮೊದಲ ಮುಸ್ಲಿಂ ಸೆನೆಟರ್ ಆಗಲಿದ್ದಾರೆ.