Yemen | ಸೇನಾ ಶಿಬಿರಗಳ ಮೇಲೆ ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ : 30 ಸೈನಿಕರು ಮೃತ್ಯು, 15 ಜನರಿಗೆ ಗಾಯ

Update: 2026-08-07 09:44 IST

Photo: x.com/DiwanDaily

ಸನಾ : ಯೆಮೆನ್‌ನ ಹೌತಿ ಬಂಡುಕೋರರು ಹಳರ್‌ಮೌತ್ ಮತ್ತು ಮಾರಿಬ್ ಪ್ರಾಂತ್ಯಗಳಲ್ಲಿರುವ ಯೆಮೆನ್ ಸೇನಾ ಶಿಬಿರಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 30 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 15 ಜನ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮೂಲಗಳು Al Jazeeraಗೆ ತಿಳಿಸಿದ್ದಾಗಿ ವರದಿಯಾಗಿದೆ.

ಈ ಸೇನಾ ನೆಲೆಗಳ ಮೇಲಿನ ದಾಳಿಯು ದೇಶದ ಅಂತರ್ಯುದ್ಧದಲ್ಲಿ ವರ್ಷಗಳ ಬಳಿಕ ಸಂಭವಿಸಿದ ಅತ್ಯಂತ ಮಾರಣಾಂತಿಕ ದಾಳಿಯಾಗಿದೆ. ಇತ್ತೀಚಿನ ವಾರಗಳಲ್ಲಿ ಯೆಮೆನ್‌ನಲ್ಲಿ ಹೆಚ್ಚುತ್ತಿರುವ ಸಂಘರ್ಷದ ಭಾಗವಾಗಿ ಈ ದಾಳಿ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹೌತಿ ಮಿಲಿಟರಿ ವಕ್ತಾರ ಯಹ್ಯಾ ಸಾರೀ, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿ ನಡೆಸಿದ ಈ ದಾಳಿಗಳಿಂದ ನೂರಾರು ಸಾವುನೋವುಗಳು ಸಂಭವಿಸಿವೆ ಎಂದು ತಿಳಿಸಿದ್ದಾರೆ.

ಈ ದಾಳಿಯನ್ನು ಯೆಮೆನ್ ಸೇನೆಯು ದೃಢಪಡಿಸಿದ್ದು, ಇದು ಹೌತಿಗಳ ವಿರುದ್ಧ ತಾವು ನಡೆಸಿದ ದಾಳಿಗಳಿಗೆ ಪ್ರತಿಯಾಗಿ ನಡೆದಿದೆ ಎಂದು ತಿಳಿಸಿದೆ. ಸಾವುನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಮಾರಿಬ್‌ನ ಉತ್ತರಕ್ಕಿರುವ ಅಲ್-ಜೌಫ್ ಪ್ರಾಂತ್ಯದಿಂದ ಹೌತಿಗಳು ಎಂಟು ಕ್ಷಿಪಣಿಗಳನ್ನು ಹಾರಿಸಿದ್ದು, ಹಳರ್‌ಮೌತ್ ನ  ಅಲ್-ಥಿನಿಯಾ ಹಾಗೂ ಅಲ್-ಅಬ್ರ್ ಮತ್ತು ಮಾರಿಬ್‌ನ ಅಲ್-ರೌಕ್ ಅನ್ನು ಗುರಿಯಾಗಿಸಿಕೊಂಡಿತ್ತು ಎಂದು ಯೆಮೆನ್ ಮಿಲಿಟರಿ ಮೂಲಗಳು ತಿಳಿಸಿವೆ.

ಹಳರ್‌ಮೌತ್ ನಲ್ಲಿರುವ ಹೋಮ್ ಲ್ಯಾಂಡ್ ಶೀಲ್ಡ್ ಫೋರ್ಸಸ್, ಎಮರ್ಜೆನ್ಸಿ ಫೋರ್ಸಸ್ ಮತ್ತು ಫಸ್ಟ್ ಮಿಲಿಟರಿ ರೀಜನ್ ಸೇರಿದಂತೆ ಹಲವು ಸರ್ಕಾರಿ ಸೇನಾ ಘಟಕಗಳಿಗೆ ಸೇರಿದ ಶಿಬಿರಗಳ ಮೇಲೆ ಅಪ್ಪಳಿಸಿದೆ ಎಂದು Al Jazeeraದ ಯೆಮೆನ್ ವ್ಯವಹಾರಗಳ ಸಂಪಾದಕ ಅಹ್ಮದ್ ಅಲ್-ಶಲಾಫಿ ವರದಿ ಮಾಡಿದ್ದಾರೆ.

ಸೈನಿಕರು ಬೆಳಗಿನ ತರಬೇತಿ ವ್ಯಾಯಾಮಕ್ಕಾಗಿ ಸೇರಿದ್ದರಿಂದ ಸಾವುನೋವುಗಳು ಹೆಚ್ಚಾಗಿವೆ ಎಂದು ಫಸ್ಟ್ ಎಮರ್ಜೆನ್ಸಿ ಡಿವಿಷನ್ ಕಮಾಂಡ್ ತಿಳಿಸಿದೆ.

ಸೌದಿ ಬೆಂಬಲದೊಂದಿಗೆ 2022ರಲ್ಲಿ ರಚನೆಯಾಗಿರುವ ಹೋಮ್ ಲ್ಯಾಂಡ್ ಶೀಲ್ಡ್ ಫೋರ್ಸಸ್, ಮಾರಿಬ್-ಹದ್ರಮೌತ್ ಗಡಿ ಮತ್ತು ಸೌದಿ ಗಡಿಯನ್ನು ಕಾಯುತ್ತದೆ. ಈ ಪಡೆ ಈ ವರ್ಷದ ಆರಂಭದಲ್ಲಿ ಸದರ್ನ್ ಟ್ರಾನ್ಸಿಶನಲ್ ಕೌನ್ಸಿಲ್ (ಎಸ್ಟಿಸಿ) ಸೇನೆಗಳ ವಿರುದ್ಧ ಹೋರಾಡಿತ್ತು.

2025ರ ಕೊನೆಯಲ್ಲಿ ಅಧ್ಯಕ್ಷೀಯ ಆದೇಶದ ಮೂಲಕ ಸೃಷ್ಟಿಸಲಾದ ಎಮರ್ಜೆನ್ಸಿ ಫೋರ್ಸಸ್, ಅಲ್-ಜೌಫ್ ಮತ್ತು ಹಳರ್‌ಮೌತ್ ನಲ್ಲಿರುವ ಭೂ ಗಡಿಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿದ್ದು, ಹೌತಿ ವಿರೋಧಿ ವಲಯಗಳ ರಕ್ಷಣೆಗಾಗಿ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News